

ಹುಬ್ಬಳ್ಳಿ: ಜಗತ್ತಿನ ಮೂರು ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದು. ಇದು ನಮ್ಮ ದೇವ ಭಾಷೆಯೂ ಹೌದು ಎಂದು ಚಿತ್ರರಂಗದ ಹಿರಿಯ ನಟ ಎಸ್. ದೊಡ್ಡಣ್ಣ ಅಭಿಪ್ರಾಯಪಟ್ಟರು.
ಇಲ್ಲಿಯ ಕಿಮ್ಸ್‌ನ ಸಭಾಂಗಣದಲ್ಲಿ ಕನ್ನಡ ಸಂಘದಿಂದ ಆಯೋಜಿಸಿರುವ ಕನ್ನಡ ಸಂಸ್ಕೃತಿಯ ಸಂಭ್ರಮ ‘ಡಿಂಡಿಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಕನ್ನಡ ಭಾಷೆಯ ಹಿರಿಮೆ, ಗರಿಮೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಿಲಾ ಶಾಸನಗಳಲ್ಲಿಯೂ ಅದರ ಮಾಧುರ್ಯ ಹರಡಿದೆ. ಇಂಥ ಭಾಷೆಯನ್ನು ನಾವು ಕಡೆಗಣಿಸಬಾರದು. ಆಂಗ್ಲ ಭಾಷೆಯ ವ್ಯಾಮೋಹ ಬಿಡಿ ಎಂದರು ಸಲಹೆ ನೀಡಿದರು.
ಜೀವನದಲ್ಲಿ ನಾಲ್ಕು ಪ್ರಮುಖ ಆಧಾರ ಕಂಬಗಳು. ತಾಯಿ, ತಂದೆ, ಗುರು ಹಾಗೂ ದೈವ. ಪ್ರತಿಯೊಂದು ಕಾರ್ಯದಲ್ಲಿಯೂ ಇವರ ಸ್ಮರಣೆ ಅಗತ್ಯ. ಇವರಿಂದಲೇ ನಮ್ಮ ಬದುಕಿಗೆ ರಕ್ಷೆ, ಪ್ರೀತಿ ಎಂದರು.
ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಎಸ್. ದೊಡ್ಡಣ್ಣ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.
ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಚಲನಚಿತ್ರ ನಿರ್ದೇಶಕ ಡಾ. ಅರುಣಕುಮಾರ ಟಿ.ಆರ್., ಡಾ. ಶ್ಯಾಮಸುಂದರ, ವಿಜಯಶ್ರೀ ಬಿ.ಎಚ್., ತರುಣಕುಮರ, ನಿರ್ಮಲಾ ಕಮರಿ, ಡಾ. ಬಸವರಾಜ ಪಾಟೀಲ, ಡಾ. ಸುನೀಲ ಗೋಖಲೆ, ಅಶೋಕ ಕಶ್ಯಪ್, ಡಾ.ಕೆ.ಎಫ್. ಕಮ್ಮಾರ, ಡಾ. ಸುನೀಲ ಬಿರಾದಾರ ಇತರರಿದ್ದರು.
ಡಾ. ರಾಜಶೇಖರ ದ್ಯಾಬೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವಿನಿ ವೆಂಕಟೇಶ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಾಹಿತ್ಯ ಕುದ್ರೊಳ್ಳಿ, ಸಿ. ಚಂದನ್ ನಿರೂಪಿಸಿದರು.