ಬದುಕಿನಲ್ಲಿ ಸೋಲುಗಳನ್ನು ಕಂಡವರೇ ನಮಗೆ ಆದರ್ಶ: ಡಾ.ಎಂ.ಡಿ ಸುದರ್ಶನ್

18
Published on

ಮೈಸೂರು: ಸೋಲುಗಳು ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ಅದರಿಂದ ನಾವು ಹೇಗೆ ಇರಬೇಕು? ಹೇಗೆ ಇರಬಾರದು? ಎಂಬುದನನು ಅರಿಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಸಲಹೆ ನೀಡಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ಸ್ನಾತಕ ಪದವಿಯ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬದುಕಿನಲ್ಲಿ ಅನೇಕ ಸೋಲುಗಳನ್ನು ಕಂಡವರು ನಮಗೆ ಆದರ್ಶ ಪ್ರಾಯರಾಗುತ್ತಾರೆಯೇ ಹೊರತು, ತಕ್ಷಣದಲ್ಲಿ ಏನನ್ನೋ ಸಾಧಿಸಿದವರಲ್ಲ. ಸೋಲುಗಳು ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ಅದರಿಂದ ನಾವು ಹೇಗೆ ಇರಬೇಕು? ಹೇಗೆ ಇರಬಾರದು? ಏನು ಮಾಡಬೇಕು ? ಏನು ಮಾಡಬಾರದು ? ಎಂಬುದನ್ನು ಅರಿತುಕೊಂಡು ನಮ್ಮ ಬದುಕನ್ನು ಸರಿಯಾಗಿ ರೂಪಿಸಿಕೊಳ್ಳಬಹುದಾಗಿದೆ ಎಂದರು.
ನಿಚ್ಚಳವಾದ ಗುರಿ ಇದ್ದರೆ ಮಾತ್ರ ಸಾಧನೆ ಮಾಡಬಹುದು. ಅದಕ್ಕಾಗಿ ವಿದ್ಯಾರ್ಥಿಗಳು ಆತ್ಮಶ್ವಾಸದಿಂದ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಬೇಕು. ನಿಮ್ಮ ಸುತ್ತ ಇರುವ ಸ್ನೇಹಿತರನ್ನು ನೀವು ಗಮನಿಸಿಕೊಳ್ಳಬೇಕು. ಏಕೆಂದರೆ ವಿದ್ಯಾರ್ಥಿಗಳ ವಿಕಾಸದಲ್ಲಿ ಮತ್ತು ಸಾಧನೆಯಲ್ಲಿ ಸ್ನೇಹಿತರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.
ಕೇವಲ ಸರ್ಕಾರಿ ನೌಕರಿಯನ್ನು ಗಳಿಸುವುದೇ ಸಾಧನೆ ಎಂದು ಅರ್ಥವಲ್ಲ. ನಾವು ಏನನ್ನೇ ಸಾಧಿಸಿದರೂ ನಮ್ಮ ಸುತ್ತಮುತ್ತಲಿನವರನ್ನು ದಯೆ ಮತ್ತು ಕರುಣೆಯಿಂದ ಕಾಣಬೇಕು. ಹಾಗಾದಾಗ ಮಾತ್ರ ಸ್ವಾಸ್ಥೃ ಸಮಾಜದ ನಿರ್ಮಾಣದಲ್ಲಿ ನಿಮ್ಮ ಪಾತ್ರವಿರುತ್ತದೆ ಎಂದರು.
ಬದುಕು ಚಲನಚಿತ್ರದಂತಲ್ಲ. ವಾಸ್ತವದಲ್ಲಿ ಎಲ್ಲವೂ ನಿಧಾನವಾಗಿ ಚಲಿಸುತ್ತದೆ ಎಂಬ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆಯ ಸಾಧಕ-ಬಾಧಕಗಳನ್ನು ತಿಳಿದುಕೊಂಡು ನೀವು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವುದರತ್ತ ಗಮನಕೊಡಿ ಎಂದು ಹೇಳಿದರು.
ಬೆಂಗಳೂರಿನ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಸಹಾಯಕ ವ್ಯವಸ್ಥಾಪಕ ಕೆ. ಮಹಾದೇವ ಮಾತನಾಡಿ, ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವುದಕ್ಕೂ ಉತ್ತಮ ಸ್ನೇಹಿತರಿರಬೇಕು. ತಂದೆ- ತಾಯಿಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳ ಶ್ರಮಿಸುತ್ತಾರೆ ಎಂಬುದನ್ನು ನೆನಪಿಡಿ. ನಿಮ್ಮ ಕೈಯಲ್ಲಿರುವ ಮೊಬೈಲು ಬಹಳ ಕೆಟ್ಟದು. ಅದನ್ನು ಮಿತವಾಗಿ ಬಳಸಿ, ಕಿರಿಯರನ್ನು ಪ್ರೀತಿಯಿಂದ, ಹಿರಿಯರನ್ನು ಗೌರವದಿಂದ ಕಾಣಿ ಎಂದು ಹೇಳಿದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಜೆಎಸ್‌ಎಸ್ ಮಹಾದ್ಯಾಪೀಠದಿಂದ ಪ್ರಾರಂಭವಾದ ಮೊದಲ ಕಾಲೇಜು ನಮ್ಮದು. ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು ಎಂಬ ಹೆಗ್ಗಳಿಕೆಯಿದೆ. ಆದರೆ ಕಾಲೇಜುಗಳು ಪದವೀಧರ ಸೃಷ್ಟ್ಟಿಸುವ ಕಾರ್ಖಾನೆಗಳಾಗದೆ, ಸೃಜನಶೀಲ ವಿದ್ಯಾರ್ಥಿಗಳನ್ನು ನೀಡುವ ವಿದ್ಯಾಕೇಂದ್ರಗಳಾಗಬೇಕು ಎಂದರು.
ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಅದಕ್ಕಾಗಿಯೇ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳು ಅಸ್ತಿತ್ವದಲ್ಲಿರುವುದು. ಈ ವೇದಿಕೆಗಳ ಮೂಲಕ ಅನೇಕ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ. ಸಾಧಿಸಬೇಕೆಂಬ ಗುರಿ, ಛಲ ಇರುವವರಿಗೆ ಯಾವುದೇ ಮಿತಿಗಳಿರುವುದಿಲ್ಲ. ತುಳುನಾಡಿನ ಅಂಬಿಕಾ ಎಂಬ ಹೆಣ್ಣುಮಗಳು ಗುರಿ ಮತ್ತು ಛಲದೊಂದಿಗೆ ಉನ್ನತ ಹುದ್ದೆಗೇರಿರುವುದು ಆದರ್ಶ ಪ್ರಾಯವಾದುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಸಿ.ಆರ್. ಮಧುಸೂದನ್, ಕ್ರೀಡಾ ವೇದಿಕೆಯ ಸಂಚಾಲಕ ಎಂ. ಕಾರ್ತಿಕ್ ಇದ್ದರು. ಸಾಂಸ್ಕೃತಿಕ ಮತ್ತು ಕ್ರೀಡೆಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net