

ಮುಧೋಳ: ಹಲಗಲಿ-ಮೆಳಿಗೇರಿ ಏತ ನೀರಾವರಿ ಯೋಜನೆಯಿಂದ 8840 ಎಕರೆ ಜಮೀನಿಗೆ ನೀರುಣಿಸಲು ಸಾಧ್ಯವಾಗಲಿದೆ. ಜೂನ್ ವೇಳೆಗೆ ಯೋಜನೆ ಕಾರ್ಯಗತವಾಗಲಿದ್ದು, ಅಭಿವೃದ್ಧಿ ವಿಷಯದಲ್ಲಿ ನಮ್ಮ ಸರ್ಕಾರ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ತಾಲೂಕಿನ ಹಲಗಲಿ ಗ್ರಾಮದಲ್ಲಿ ಭಾನುವಾರ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲಗಲಿ-ಮೆಳ್ಳಿಗೇರಿ ಏತ ನೀರಾವರಿ ನಮ್ಮ ಅವಧಿಯಲ್ಲಾಗಿದೆ ಎಂದು ಬಿಜೆಪಿಯ ಕೆಲ ಜನರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸಿದ್ದಾರೆ. ನಿಮ್ಮ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಅಂದಾಜು 2 ಲಕ್ಷ ಕೋಟಿ ರೂ. ಮೌಲ್ಯದ ಕಾಮಗಾರಿಗೆ ಹಣವಿಲ್ಲದೆ ಭೂಮಿಪೂಜೆ ಮಾಡಿದ್ದೀರಿ. ಅವುಗಳಿಗೆ ಈಗ ನಾವು ಹಣ ಬಿಡುಗಡೆ ಮಾಡಿ ನಾಡಿನ ಜನರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ ಎಂದರು.
ಹಲಗಲಿ-ಮೆಳ್ಳಿಗೇರಿ ಏತ ನೀರಾವರಿ ಯೋಜನೆಯಿಂದ ಮೆಳ್ಳಿಗೇರಿಯ 1844, ಕಿಶೋರಿ 91, ವಜ್ಜರಮಟ್ಟಿ 661, ಚಿಕ್ಕಾಲಗುಂಡಿ 14, ಹಲಗಲಿ 4989 ಹಾಗೂ ಆಲಗುಂಡಿಯ 69 ಎಕರೆ ಪ್ರದೇಶ ನೀರಾವರಿಯಾಗಲಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ನಮ್ಮೆಲ್ಲರ ಪರಿಶ್ರಮದಿಂದ ಆಲಮಟ್ಟಿ ಅಣೆಕಟ್ಟಿಗೆ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿತ್ತು ಎಂದರು.
ಸಮಾಜದಲ್ಲಿ ಯಾವ ಜಾತಿಯ ಜನರು ಎಷ್ಟು ಪ್ರಮಾಣದಲ್ಲಿದ್ದಾರೆ. ಅವರ ಸಾಮಾಜಿಕ ಸ್ಥಿತಿಗತಿ ಅರಿತು ಅವರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಜಾತಿಗಣತಿ ಆರಂಭಿಸಿದರೆ, ಕೆಲವರು ಅದರಲ್ಲೂ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬೆಲೆಯೇರಿಕೆಯ ನೆಪವಿಟ್ಟುಕೊಂಡು ಜನಾಕ್ರೋಶದ ಹೆಸರಿನಲ್ಲಿ ಪ್ರತಿಭಟನೆಗಿಳಿದಿರುವ ಬಿಜೆಪಿಗರು ತಮ್ಮದೇ ಕೇಂದ್ರ ಸರ್ಕಾರ ಸಿಲಿಂಡರ್ ಹಾಗೂ ಡಿಸೇಲ್ ಬೆಲೆ ಏರಿಕೆ ಮಾಡಿದೆ. ಮೊದಲು ಅದರ ಬಗ್ಗೆ ಹೋರಾಟ ಮಾಡಲಿ ಎಂದು ಜನಾಕ್ರೋಶ ಹೋರಾಟಕ್ಕೆ ಟಾಂಗ್ ನೀಡಿದರು.
ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ. ಪಾಟೀಲ, ಮುಖಂಡ ಬಿಪಿನ್‌ಚಂದ್ರ ಸರನಾಯಕ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಭೀಮಪ್ಪ ಮೆಟಗುಡ್ಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ವೆಂಕಣ್ಣ ಹೊಸಮನಿ, ಮುದಕಣ್ಣ ಅಂಬಿಗೇರ, ವೀರಣ್ಣ ಬಿ.ಚಿಕ್ಕೂರ, ತಹಸೀಲ್ದಾರ್ ಮಹಾದೇವ ಸನಮುರಿ, ತಾಪಂ ಇಒ ಉಮೇಶ ಸಿದ್ದಾಳ, ಅಧೀಕ್ಷಕ ಅಭಿಯಂತರ ಆರ್.ಟಿ. ಮೇತ್ರಿ, ಎಇಇ ಎಚ್.ಆರ್. ಮಹಾರಡ್ಡಿ, ಪಿಡಿಒ ರವೀಂದ್ರ ಮಹೇಂದ್ರಕರ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಮುತಾಲಿಕ ಇತರರಿದ್ದರು.