

ನಾಗಮಂಗಲ: ನಾಡಿನಲ್ಲಿ ಸಮಾನತೆ ಸಾರುವ ಸಲುವಾಗಿ ಅನೇಕ ಮಹನೀಯರು ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ್ದು ಅಂತಹ ಮಹಾನ್ ಚಿಂತಕರ ಆಶಯದಂತೆ ನಮ್ಮ ಸರ್ಕಾರ ಜಾತೀಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಸಂತ ಶ್ರೇಷ್ಠ ಶ್ರೀಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತೀಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಿದವರು. ಸಮಾಜದಲ್ಲಿದ್ದ ಸಾಮಾಜಿಕ ಪಿಡುಗುಗಳ ವಿರುದ್ಧ ಗಟ್ಟಿಯಾಗಿ ಹೋರಾಡಿದವರಾಗಿದ್ದಾರೆ. ಜಾತಿ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸಿದವರ ಪೈಕಿ ಕನಕದಾಸರು ಮುಂಚೂಣಿಯಲ್ಲಿದ್ದವರು. ಸರಳತೆ ಮತ್ತು ಪ್ರಾಮಾಣಿಕತೆಯನ್ನು ಜಗತ್ತಿಗೆ ಸಾರಿದ ಮಹಾನ್ ಕೀರ್ತನಾಕಾರರೆನಿಸಿರುವ ಕನಕದಾಸರು ಶ್ರೇಷ್ಠ ಸಮಾಜ ನಿರ್ಮಿಸಲು ಹಲವು ಸುಧಾರಣೆಗಳ ಅಗತ್ಯಗಳಿಗಾಗಿ ನೂರಾರು ವರ್ಷಗಳ ಹಿಂದೆಯೇ ಹೋರಾಡಿದವರು. ಅವರ ಅಂದಿನ ನಡುವಳಿಕೆಯೇ ಪ್ರಸ್ತುತ ಕಾಲಘಟ್ಟದಲ್ಲಿ ನಮಗೆ ಸ್ಫೂರ್ತಿಯಾಗಿದ್ದು ಇಂತಹ ಅನೇಕ ಮಹನೀಯರು ನೀಡಿದ ಸಂದೇಶದಂತೆ ನಮ್ಮ ಸರ್ಕಾರ ನಡೆಯುತ್ತಿದೆ ಎಂದರು.
ಮಹನೀಯರ ಜಯಂತಿಗಳನ್ನು ಒಂದು ವರ್ಗ ಅಥವಾ ಒಂದು ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಸಾಧಕರ ಜಯಂತಿಗಳನ್ನು ಆಚರಿಸಿದಾಗ ಮಾತ್ರ ಆ ಆಚರಣೆಗಳಿಗೆ ಅರ್ಥ ಬರುತ್ತದೆ. ಆದರೆ ಇಂತಹ ಅರ್ಥಪೂರ್ಣವಾದ ಆಚರಣೆಗಳಿಗೆ ಸಾರ್ವಜನಿಕರು ಬಾರದೆ ಸ್ಥಳೀಯವಾಗಿ ಗ್ರಾಮಗಳ ಹಂತಗಳಲ್ಲಿಯೇ ಆಚರಿಸಿಕೊಳ್ಳುತ್ತಿದ್ದು, ತಾಲೂಕು ಮಟ್ಟದ ಕಾರ್ಯಕ್ರಮಗಳಿಗೆ ಬಾರದಿರುವುದು ಬೇಸರ ತರಿಸುತ್ತದೆ ಎಂದರು.
ತಹಸೀಲ್ದಾರ್ ವಿರುದ್ಧ ಗರಂ: ಕನಕದಾಸರ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕುರುಬ ಸಮುದಾಯದ ಗಣ್ಯರನ್ನು ಸನ್ಮಾನಿಸಲು ಗಣ್ಯರನ್ನು ಆಹ್ವಾನಿಸಲಾಗಿತ್ತು. ಸಚಿವ ಎನ್.ಚಲುವರಾಯಸ್ವಾಮಿ ಅವರ ಭಾಷಣದ ನಂತರ ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಸಾಲಾಗಿ ಕೂರಿಸಿ ಸಚಿವರು ಸನ್ಮಾನಿಸಲು ಮುಂದಾದರೆ, ಶಾಲು, ಹಾರ ಹಾಗೂ ಸನ್ಮಾನಿತ ವಸ್ತುಗಳು ಇಲ್ಲದಿರುವುದನ್ನು ಕಂಡು ಸಚಿವರು ತಹಸೀಲ್ದಾರ್ ಕಾರ್ಯವೈಖರಿಯ ವಿರುದ್ಧ ವೇದಿಕೆಯಲ್ಲಿ ಗರಂ ಆಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ನೂತನವಾಗಿ ಬಂದಿದ್ದೇನೆ ಎಂದು ತಹಸೀಲ್ದಾರ್ ಉತ್ತರ ನೀಡಿದ್ದಕ್ಕೆ ಗರಂ ಆದ ಸಚಿವರು ತಹಸೀಲ್ದಾರ್ ಹೊಸದಾಗಿ ಈಗ ಬಂದಿದ್ದರೇನಂತೆ ಕಚೇರಿಯಲ್ಲಿ ಒಂದು ವ್ಯವಸ್ಥೆ ಎಂಬುದು ಇಲ್ಲವೇ ಎಂದು ತಹಸೀಲ್ದಾರ್ ಆದರ್ಶ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ತಹಸೀಲ್ದಾರ್ ಆದರ್ಶ, ತಾಪಂ ಇಒ ಸತೀಶ್, ಸಿಡಿಪಿಒ ಕೃಷ್ಣಮೂರ್ತಿ, ಡಿವೈಎಸ್ಪಿ ಚಲುವರಾಜು, ಕುರುಬರ ಸಂಘದ ತಾಲೂಕು ಅಧ್ಯಕ್ಷ ಬಸವೇಗೌಡ, ಪುರಸಭೆ ಅಧ್ಯಕ್ಷ ಅಲಿಅನ್ಸರ್‌ಪಾಷ, ಮುಖಂಡರಾದ ಮಂಜೇಗೌಡ, ರಾಘವೇಂದ್ರ, ಸಾವಿತ್ರಮ್ಮ, ಚಿಕ್ಕಮ್ಮ ಸೇರಿದಂತೆ ಮತ್ತಿತರಿದ್ದರು.