ಒಳಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧ, 3 ತಿಂಗಳಲ್ಲಿ ವರದಿ: DCM DK Shivakumar

Internal Reservation (2)
Published on

ಬೆಂಗಳೂರು: ಸರ್ಕಾರ ಒಳ ಮೀಸಲಾತಿ(Internal Reservation) ಜಾರಿಗೆ ಬದ್ಧವಾಗಿದ್ದು, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹೇಳಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  (DCM DK Shivakumar) ತಿಳಿಸಿದರು.

ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ (DK Shivakumar), ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ವಿಚಾರವಾಗಿ ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಚಿತ್ರದುರ್ಗದ ಸಮಾವೇಶದಲ್ಲೂ ನಾವು ಈ ವಿಚಾರವಾಗಿ ಜನರಿಗೆ ಮಾತು ಕೊಟ್ಟಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಜನಸಂಖ್ಯೆ ಆಧಾರದ ಹಾಗೂ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧವಾಗಿದೆ. ಸಂವಿಧಾನ ಆರಂಭದಿಂದ ಇಲ್ಲಿಯವರೆಗೂ ಸಾಮಾಜಿಕ ನ್ಯಾಯ ಕಾಪಾಡುತ್ತಾ ಬಂದಿದೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಪಕ್ಷಾತೀತವಾಗಿ ನಾಯಕರುಗಳು ಬಂದು ಅಭಿನಂದನೆ ಸಲ್ಲಿಸಿದ್ದಾರೆ. ಸಮಿತಿ ವರದಿ ವಿಳಂಬವಾದರೆ ನೇಮಕಾತಿಯೂ ವಿಳಂಬವಾಗಲಿದೆ ಎಂದು ಕೇಳಿದಾಗ, ಮೂರು ತಿಂಗಳಲ್ಲಿ ವರದಿ ನೀಡಲು ನಾವು ಸೂಚಿಸಿದ್ದು, ಅವರು ಮೂರು ತಿಂಗಳಲ್ಲಿ ವರದಿ ನೀಡುವ ವಿಶ್ವಾಸವಿದೆ ಎಂದರು.

ಮಾದಿಗ ಸಮುದಾಯಕ್ಕೆ ಒಳಮೀಸಲು ಆದಷ್ಟು ಶೀಘ್ರ ಜಾರಿಗೆ ತರಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ, ಶಿವಣ್ಣ, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ ನೇತೃತ್ವದ ನಿಯೋಗವು ಇದಕ್ಕೂ ಮುಂಚೆ ಡಿಸಿಎಂ ಡಿ.ಕೆ. ಶಿವಕುಮಾರ್ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಸಮಿತಿಗೆ ಮೂರು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ನೀಡಬಾರದು. ಮೂರು ತಿಂಗಳ ನಂತರ ಶೀಘ್ರ ಒಳಮೀಸಲಾತಿ ಜಾರಿಯಾಗಬೇಕು ಎಂದು ನಿಯೋಗವು ಡಿಸಿಎಂ(DK Shivakumar) ಬಳಿ ಮನವಿ ಮಾಡಿತು.

ಕುನ್ಹಾ ವರದಿ ನೋಡಿ ನನಗಗೇ ಕರೊನಾ ಬಂದಂತಾಗಿದೆ

ಕೋವಿಡ್ ಅವಧಿಯ ಹಗರಣಗಳ ಸಂಬಂಧ ಕುನ್ಹಾ ಅವರ ವರದಿ ಮೇಲೆ ಉಪಸಮಿತಿ ಸಭೆ ಬಗ್ಗೆ ಕೇಳಿದಾಗ, ಕುನ್ಹಾ ಅವರ ವರದಿ ನೋಡಿ, ನನಗಗೇ ಕರೊನಾ ಬರುವಂತೆ ಕಾಣುತ್ತಿದೆ. ಅಷ್ಟು ಗಾಬರಿಯಾಗಿದೆ. ನಾವು ಅವರಿಂದ ಹೆಚ್ಚಿನ ಮಾಹಿತಿ ಕೇಳಿದ್ದೇವೆ. ವರದಿಯಿಂದಲೇ ಕರೊನಾ ಹರಡುವಂತಿದೆ. ಈ ಬಗ್ಗೆ ಆರೋಗ್ಯ ಸಚಿವರು ಮಾತನಾಡುತ್ತಾರೆ ಎಂದರು.

ಗಂಗಾ ಮತಸ್ಥರು ಬೀದಿಗೆ ಬರಲು ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಕುಮಾರಣ್ಣ ಚುನಾವಣೆ ಮಾಡುತ್ತಿದ್ದಾರೆ, ಮಾಡಲಿ. ನಮಗೆ ಕುಮಾರಣ್ಣ, ಗೌಡರ ಬಗ್ಗೆ ಮಾತನಾಡಲು ಸಮಯವಿಲ್ಲ. ನಾವುಂಟು, ಆ ಕ್ಷೇತ್ರ ಹಾಗೂ ಅದರ ಜನತೆಯ ಉದ್ಧಾರವುಂಟು. ನಾವು ಆ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net