

ರಬಕವಿ-ಬನಹಟ್ಟಿ: ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಗುಣಾತ್ಮಕ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡಿ ಅವರನ್ನು ಆಧುನಿಕ ಜಗತ್ತಿಗೆ ಕಳುಹಿಸುವುದು ನಮ್ಮ ಗುರಿಯಾಗಿದೆ. ಪ್ರಾಯೋಗಿಕ ಶಿಕ್ಷಣ ಮತ್ತು ಕ್ಷೇತ್ರ ಕಾರ್ಯ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗುತ್ತದೆ ಎಂದು ಜಮಖಂಡಿ ಬಾಗಲಕೋಟೆ ವಿಶ್ವವಿದ್ಯಾಲಯದ ಮೌಲ್ಯಮಾಪನದ ವಿಭಾಗದ ರಿಜಿಸ್ಟ್ರಾರ್ ಡಾ.ಎಂ.ಎಂ.ಮರಡಿ ತಿಳಿಸಿದರು.
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಬಿಕಾಂ 3 ಮತ್ತು ನಾಲ್ಕನೆಯ ಸೆಮಿಸ್ಟರ್ ಪಠ್ಯ ಕ್ರಮ ರಚನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಡಾ.ಮರಡಿ ಮಾತನಾಡಿ, ಮುಂದುವರಿದ ಅಕೌಂಟಿಂಗ್, ಕಾರ್ಪೋರೇಟ್ ಕಾನೂನು, ಕಾರ್ಪೋರೇಟ್ ಆಡಳಿತದ ಜೊತೆಗೆ ಸಾಮರ್ಥ್ಯ ವರ್ಧನೆ ಮೌಲ್ಯ ಶಿಕ್ಷಣ ಮತ್ತು ಸಹ ಪಠ್ಯ ಏಕೀಕರಣ ಪಠ್ಯಕ್ರಮ ರಚನೆಯ ಹದಯ ಭಾಗವಾಗಿದೆ. ಹೊಸ ಪಠ್ಯ ಕ್ರಮವು ಸ್ಥಿರ ದಾಖಲೆಯಾಗಿ ಅಲ್ಲ, ಬದಲಾಗಿ ಶಿಕ್ಷಣ ವಿಕಸನಕ್ಕಾಗಿ ವಿನ್ಯಾಸಗೊಳಿಸಲಾದ ಜೀವಂತ ಮಾರ್ಗಸೂಚಿಯಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಚಿದಾನಂದ ಢವಳೇಶ್ವರ ಮಾತನಾಡಿ, ವಾಣಿಜ್ಯ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಬೇಕು. ವಾಣಿಜ್ಯ ಕ್ಷೇತ್ರ ಬೆಳೆದಂತೆ ದೇಶದ ಅಭಿವದ್ಧಿ ಸಾಧ್ಯ. ಆಧುನಿಕ ಜಗತ್ತಿಗೆ ಅವಶ್ಯಕವಾಗಿರುವ ಪಠ್ಯಕ್ರಮ ರಚನೆಯತ್ತ ಗಮನ ನೀಡಿ ಎಂದರು.
ಪ್ರಾಚಾರ್ಯ ಜಿ.ಆರ್.ಜುನ್ನಾಯ್ಕರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಗೀತಾ ಸಜ್ಜನ, ರಶ್ಮಿ ಕೊಕಟನೂರ ಮಾತನಾಡಿದರು.
ಜನತಾ ಶಿಕ್ಷಣ ಸಂಘದ ಉಪಾಧ್ಯಕ್ಷ ಬಸವರಾಜ ಭದ್ರನವರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಎಂ.ಜಿ.ಕೆರೂರ, ಶ್ರೀಶೈಲ ಯಾದವಾಡ, ಪಂಡಿತ ಹನಗಂಡಿ, ಉಪನ್ಯಾಸಕರಾದ ಪ್ರಕಾಶ ಕೆಂಗನಾಳ, ಚೇತನ ಡಾಗಾ, ಎಲ್.ಎಸ್.ಕೋರಿ ಇದ್ದರು.
ಜಿ.ಎಸ್.ಪಾಟೀಲ, ರೇಶ್ಮಾ ಗಜಾಕೋಶ, ಎಸ್.ಬಿ.ಉಕ್ಕಲಿ, ರಮೇಶ ಮಾಗುರಿ, ಶಿರಿಶ ಹಳಮನಿ, ವಿ.ವೈ.ಪಾಟೀಲ, ವಿಶ್ವಜ ಕಾಡದೇವರ, ಶ್ವೇತಾ ಮಠದ, ವೆಂಕಟೇಶ ಕುಲಕರ್ಣಿ, ಮಹಾವೀರ ಸಂಕಾರ, ಅವಿನಾಶ ಹಟ್ಟಿ, ಬಾಗಲಕೋಟೆ ಜಿಲ್ಲೆಯ ವಾಣಿಜ್ಯ ವಿಭಾಗದ ವಿವಿಧ ಕಾಲೇಜುಗಳ ಉಪನ್ಯಾಸಕರು ಭಾಗವಹಿಸಿದ್ದರು.