

ಮುಧೋಳ: ಎಲ್ಲ ಸಮಾಜದ ವಿಕಾಸವೇ ನಮ್ಮ ಗುರಿ. ಸಮಾಜದಲ್ಲಿರುವ ಸಾಧಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸತ್ಕರಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ನಗರದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವದ್ಧಿ ಸಂಘ ತಾಲೂಕು ಘಟಕದ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಒಗ್ಗೂಡಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಎಲ್ಲ ಸಮಾಜಗಳ ವಿಕಾಸವೇ ನಮ್ಮ ಗುರಿ ಎಂದು ಭಾವಿಸಿ ಆರ್ಥಿಕವಾಗಿ ದುರ್ಬಲರಾದವನ್ನು ಮೇಲೆತ್ತುವ ಕಾರ್ಯವಾಗಬೇಕು ಎಂದು ಹೇಳಿದರು.
ಎಂಎಲ್‌ಸಿ ಹಣಮಂತ ನಿರಾಣಿ ಮಾತನಾಡಿ, ಬಸವತತ್ವ ಆರಾಧಕರು ಕಾಯಕದ ಜತೆಗೆ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮುಧೋಳ ಗವಿಮಠ-ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು ಆಶೀವರ್ಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಅಂಗಡಿ ಮಾತನಾಡಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಿರ್ದೇಶಕ ರವೀಂದ್ರ ಕೋರೆ ಹಾಗೂ ಕದಳಿ ಮಹಿಳಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಉಪನ್ಯಾಸ ನೀಡಿದರು.
ಚಿತ್ರದುರ್ಗ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡರ, ವೀರಶೈವ ಲಿಂಗಾಯತ ಸಮಾಜ ತಾಲೂಕು ಅಧ್ಯಕ್ಷ ರಾಚಪ್ಪಣ್ಣ ಕರೆಹೊನ್ನ, ಸಂಗಮೇಶ ನೀಲಗುಂದ, ಸಿದ್ದು ರಾಮತೀರ್ಥ, ಡಾ.ರವಿ ನಂದಗಾಂವ, ಸುಹಾಸ್ ಅವಟಿ, ಸೀಮಾ ರಾಮತೀರ್ಥ, ರವೀಂದ್ರ ಕೊಲ್ಹಾರ, ವಿರೇಶ ಕಲಾದಗಿ, ಬಸವರಾಜ ಅಂಗಡಿ, ರಾಜಶೇಖರ ಅಂಗಡಿ, ರಾಜೇಶ ಮದರಖಂಡಿ, ಅಜಿತ ಹೊನವಾಡ, ಸುರೇಶ ಉದಪುಡಿ, ಸುರೇಶ ಅಕ್ಕಿಮರಡಿ,ಮಲ್ಲಿಕಾರ್ಜುನ ಬಟಕುರ್ಕಿ ಇದ್ದರು.
ಬಣಜಿಗ ಸಮಾಜ ಭಾವನಾತ್ಮಕ ಸಂಬಂಧವನ್ನು ಎತ್ತಿ ಹಿಡಿಯುವ ಸಮಾಜ. ಈ ಸಮಾಜ 7 ಜನ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ ಎಂದು ಚಿತ್ರದುರ್ಗದ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಬಣಜಿಗರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ವಿಶ್ವಗುರು ಬಸವಣ್ಣವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.