ನಮ್ಮ ಕರ್ತವ್ಯ ಪಾಲಿಸಿದರೆ ದೇವರ ಅನುಗ್ರಹ

snd kanva Sree
ಸಿಂಧನೂರಿನ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಕಣ್ವ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು ಭಾನುವಾರ ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಿದರು.
Published on

ಸಿಂಧನೂರು: ನಮ್ಮ ಕರ್ತವ್ಯವನ್ನು ಚೆನ್ನಾಗಿ ಪರಿಪಾಲಿಸಿದಲ್ಲಿ ದೇವರು ಅನುಗ್ರಹವನ್ನು ಮಾಡಿಯೇ ಮಾಡುತ್ತಾನೆ ಎಂದು ಕಣ್ವ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು ಹೇಳಿದರು.

ನಗರದ ಬ್ರಾಹ್ಮಣ ಓಣಿಯಲ್ಲಿರುವ ಶ್ರೀರಾಮಮಂದಿರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು. ಸಿಂಧನೂರಿಗೂ ನಮಗೂ ಅವಿನಾಭಾವ ಸಂಬಂಧವಿದ್ದು, ಮರೆಯಲು ಸಾಧ್ಯವಿಲ್ಲ. ನಮಗೆ ಪ್ರಶಂಸೆ, ಗೌರವಗಳು ದೊರೆತಿವೆ ಎಂದರೆ ಅದು ನಮಗಲ್ಲ, ನಮ್ಮ ಅಂತರ್ಯಾಮಿ ಆಗಿರುವಂತಹ ಪರಮಾತ್ಮನಿಗೆ ಸಲ್ಲುವಂತಹದ್ದು. ಪರಮಾತ್ಮನು ಎಲ್ಲರಿಂದಲೂ ಅಗಮ್ಯನಾಗಿದ್ದಾನೆ. ಆದರೆ ಅವನ ವಾಕ್ಯಗಳೆಲ್ಲವೂ ನಮಗೆ ಗಮ್ಯವಾಗಿವೆ ಎಂದರು.

ಸಿಂಧನೂರು ಅನೇಕ ಪಂಡಿತರು, ಧರ್ಮವಂತರು, ಜ್ಞಾನಿಗಳನ್ನು ಪಡೆದಂತಹ ನೆಲವಾಗಿದೆ. ಇದೇ ರೀತಿ ಮುಂದೆಯೂ ಧರ್ಮ ರಕ್ಷಣೆ, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು, ಹಿಂದು ರಾಷ್ಟ್ರ ಕಟ್ಟುವಂಥ ಕೆಲಸ ಮಾಡಲಿ ಎಂದು ಹಾರೈಸಿದರು.

ಭಕ್ತರಿಗೆ ತಪ್ತ ಮುದ್ರಾ ಧಾರಣೆ: ಶ್ರೀರಾಮ ಮಂದಿರದಲ್ಲಿ ಕಣ್ವ ಮಠದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು ಭಾನುವಾರ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಿದರು. ಆಷಾಡ ಶುದ್ಧ ಏಕಾದಶಿ ಪ್ರಯುಕ್ತ ಕಣ್ವ ಮಠಾಧೀಶರು ಮಠದ ಸಂಸ್ಥಾನ ದೇವರ ಪೂಜೆ ನೆರವೇರಿಸಿದರು.

ಹನುಮಂತ ಆಚಾರ್ಯ ಬಾದರ್ಲಿ ಅವರು ಸುದರ್ಶನ ಹೋಮ ನಡೆಸಿದರು. ಪೂರ್ಣಾಹುತಿ ನಂತರ ಶ್ರೀಗಳು ತಪ್ತ ಮುದ್ರಾಧಾರಣೆ ಮಾಡಿಕೊಂಡು, ನಂತರ ಭಕ್ತರಿಗೆ ಮುದ್ರಾ ಧಾರಣೆ ಮಾಡಿದರು. ಎಲ್ಲ ವರ್ಗದ ಭಕ್ತರು ಶ್ರೀಗಳಿಂದ ತಪ್ತ ಮುದ್ರಾ ಧಾರಣೆ ಮಾಡಿಸಿಕೊಂಡಿದ್ದು ವಿಶೇಷ. ಈ ಮೂಲಕ ಶ್ರೀಗಳು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಬಳಿಕ ಪಾಂಡುರಂಗ ಆಚಾರ್ ಕನಸಾವಿ, ಪ್ರಶಾಂತ ಆಚಾರ್ ಕುಲಕರ್ಣಿ, ಗೋವಿಂದಾಚಾರ್ ಪುರೋಹಿತ್,ಕಾರ್ತಿಕ್ ಆಚಾರ್ ಜೋಷಿ ಸಾಲಗುಂದ, ರಂಗನಾಥ ಆಚಾರ್ಯ ಸಾಲಗುಂದಾ,ಗೋವಿಂದಾಚಾರ್ಯ ಬಾದರ್ಲಿ ಅವರು ಭಾಗವತ ಪ್ರವಚನ ನೀಡಿದರು. ಮಠದ ಟ್ರಸ್ಟ್ ಕಾರ್ಯಾಧ್ಯಕ್ಷ ರಾಘವೇಂದ್ರ ಅಲಗೂರ್, ಸದಸ್ಯರಾದ ಪ್ರಕಾಶ್ ರಾವ್, ಹನುಮಂತರಾವ್ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ಕೃಷ್ಣಾಚಾರ್, ಗಂಗಾಧರ ಆಚಾರ್, ಅಚ್ಯುತಾಚಾರ್ ಇತರರಿದ್ದರು. ಈ ವರ್ಷದ ಚಾತುರ್ಮಾಸ್ಯ ಸಂಕಲ್ಪವನ್ನು ಜು.20 ರಿಂದ ಬುದ್ದಿನ್ನಿಯ ಶ್ರೀ ಮಾಧವತೀರ್ಥರ ಸನ್ನಿಧಾನದಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಪಂ. ರಂಗನಾಥ ಆಚಾರ್ಯ ಸಾಲಗುಂದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net