

ಕಡೂರು: ಕಾಡುಹಂದಿ ಬೇಟೆಯಾಡಿ ಮಾಂಸ ಮಾರುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ತಾಲೂಕಿನ ಮಲ್ಲೇಶ್ವರ ಸಮೀಪದ ವೀರಭದ್ರಪ್ಪ ಬಡಾವಣೆಯಲ್ಲಿ ಕಾಡುಹಂದಿ ಮಾಂಸ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಇಲಾಖೆ ಅಧಿಕಾರಿಗಳು ಬಂಧನದಲ್ಲಿ ಇಟ್ಟಿದ್ದ ಒಂದು ಜೀವಂತ ಕಾಡುಹಂದಿ ಹಾಗೂ 18ಕೆ ಜಿ ಪರಿವರ್ತಿತ ಹಂದಿ ಮಾಂಸವನ್ನು ಹಾಗೂ ಕೃತ್ಯಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡು ವೀರಭದ್ರಪ್ಪ ಬಡಾವಣೆಯ ಕರ್ಣ ಮತ್ತು ಕುಬೇರ, 31ಎಕರೆ ಬಡಾವಣೆಯ ಕುಮಾರ್ ಹಾಗೂ ಶಿವಮೊಗ್ಗದ ಗಾಡಿಕೊಪ್ಪ ಅಂಬೇಡ್ಕರ್ ನಗರದ ಬಸವರಾಜ್ ಅವರನ್ನು ವಶಕ್ಕೆ ಪಡೆದು ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನದಾಫ್, ಉಪವಲಯ ಅರಣ್ಯಾಧಿಕಾರಿ ಸಂತೋಷ್, ಹರೀಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.