ಒಟಿಎಸ್ ಒಂದು ತಿಂಗಳು ವಿಸ್ತರಣೆ: ಡಿಸಿಎಂ ಡಿಕೆಶಿ ಘೋಷಣೆ

Vijayavani-Featured-Image
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ಒಂದು ಬಾರಿಯ ಪರಿಹಾರ ಯೋಜನೆ (ಒಟಿಎಸ್) ಕಾಲಾವಧಿಯನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರ ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಒತ್ತಡದ ಮೇರೆಗೆ ಒಟಿಎಸ್ ಯೋಜನೆಯನ್ನು ಆ.31ರವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈವರೆಗೆ 3 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 400 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆ ಹಾಗೂ ಮತ್ತೆ ಕೆಲವರು ಚೆಕ್ ನೀಡಿದ್ದು, ಜು.31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಆ.31ರವರೆಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

ಡಿಸಿಎಂ ಸೂಚನೆ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಿನಾಂಕ ವಿಸ್ತರಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಶೀಘ್ರ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದಕ್ಕೆ ಒಪ್ಪಿಗೆ ಪಡೆದ ನಂತರ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಆ ಬಳಿಕವೇ ಸಾರ್ವಜನಿಕರು ಒಟಿಎಸ್ ಹಣವನ್ನು ಪಾವತಿಸಬಹುದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net