

ಉಡುಪಿ: ಜಿಲ್ಲೆಯಲ್ಲಿ ಏ.1ರಿಂದ ಪಡಿತರ ವಿತರಣೆ ಆರಂಭವಾಗಲಿದ್ದು, ಕರೊನಾ ಹಿನ್ನೆಲೆಯಲ್ಲಿ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳವಾರ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಅಂತ್ಯೋದಯ, ಬಿಪಿಎಲ್ ಮತ್ತು ಆಹಾರ ಪಡೆಯಲು ನೊಂದಾಯಿಸಿರುವ ಎಪಿಎಲ್ ಕಾರ್ಡ್‌ದಾರರಿಗೆ ಎರಡು ತಿಂಗಳ ಪಡಿತರ ವಿತರಿಸುವಂತೆ ಸೂಚಿಸಿದ ಸಚಿವ ಕೋಟ, ಪಡಿತರ ಪಡೆಯಲು ಒಟಿಪಿ ಸಂಖ್ಯೆ ಕಡ್ಡಾಯಗೊಳಿಸದೆ, ಪಡಿತರ ಚೀಟಿ ಸಂಖ್ಯೆ ನಮೂದಿಸಿಕೊಂಡರೆ ಸಾಕು.
ಪಡಿತರ ವಿತರಣೆಯಲ್ಲಿ ಜನಸಂದಣಿ ತಪ್ಪಿಸಲು, ಪ್ರತಿ ಅಂಗಡಿಯಲ್ಲಿ, ದಿನದಲ್ಲಿ ನಿಗದಿತ ಸಂಖ್ಯೆಯ ಪಡಿತರದಾರರಿಗೆ ಮಾತ್ರ ಅಂಗಡಿಗೆ ಬರುವಂತೆ ಮಾಹಿತಿ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಿಸಬೇಕು ಎಂದರು.
ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ತಹಸೀಲ್ದಾರರು ಉಸ್ತುವಾರಿ ವಹಿಸಿಕೊಳ್ಳುವಂತೆ ಸೂಚಿಸಿದರು. ಶಾಲೆಗಳಲ್ಲಿ ಉಳಿದಿರುವ ಬಿಸಿಯೂಟದ ಅಕ್ಕಿಯನ್ನು ವಿದ್ಯಾರ್ಥಿಗಳ ಪಾಲಕರಿಗೆ ನೀಡುವಂತೆ ಮತ್ತು ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಲಾಗುವ ಕಿಟ್‌ಗಳನ್ನು ಅವರ ಮನೆಗೆಳಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ನಿರಾಶ್ರಿತರಿಗೆ ಅಗತ್ಯ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಬಲಪಾಡಿ, ಮಂದಾರ್ತಿ, ಕೊಲ್ಲೂರು ದೇವಳದಲ್ಲಿ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಐಸೊಲೇಟೆಡ್ ವಾರ್ಡ್ ಹೆಚ್ಚಳಕ್ಕೆ ಕ್ರಮ: ತಾಲೂಕುಮಟ್ಟದಲ್ಲಿ ಕರೊನಾ ಶಂಕಿತರನ್ನು ದಾಖಲು ಮಾಡಲು, ಪ್ರತ್ಯೇಕ ಐಸೊಲೇಟೆಡ್ ವಾರ್ಡ್ ಹೆಚ್ಚಿಸುವುದಾಗಿ ಭರವಸೆ ನೀಡಿದರು. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ದಿನಸಿವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ 11 ರವರೆಗೆ ಸಮಯ ನಿಗದಿಪಡಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ಸೂಚನೆ ನೀಡಿದ್ದು, ಸಮಸ್ಯೆಗಳಿಲ್ಲ. ಪೊಲೀಸರು ಹೊರಗೆ ಬರುವ ಜನರನ್ನು ನಿರ್ದಿಷ್ಟ ಮತ್ತು ಖಚಿತ ಕಾರಣ ಕೇಳಿ ಅವಕಾಶ ಕೊಡಬೇಕು. ಸುಮ್ಮನೆ ತಿರುಗುವವರ ವಿರುದ್ದ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.
ರಾಜ್ಯ ವಿಧಾನಪರಿಷತ್ತು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕರೊನಾ ಲ್ಯಾಬ್‌ಗೆ ಪ್ರಯತ್ನ: ಜಿಲ್ಲೆಯಲ್ಲಿ ಕರೊನಾ ಪತ್ತೆ ಲ್ಯಾಬ್ ತೆರೆಯಲು ಅಗತ್ಯ ಸೌಲಭ್ಯಗಳಿವೆ. ಕೂಡಲೇ ಲ್ಯಾಬ್‌ಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಸಚಿವ ಕೋಟ ತಿಳಿಸಿದರು. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ವರದಿ ಬಂದಿರುವ ಮೂವರು ರೋಗಿಗಳನ್ನು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡಾ ಸಚಿವರಿಗೆ ಮಾಹಿತಿ ನೀಡಿದರು.