

ಮಂಡ್ಯ: ಆಸ್ಟಿಯೊಪೊರೋಸಿಸ್ ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವುದರ ಜತೆಗೆ ಬಾಧಿಸುತ್ತದೆ ಎಂದು ಥೈರಾಯ್ಡ ಮತ್ತು ಡಯಾಬಿಟಿಕ್ ರೋಗ ತಜ್ಞೆ ಡಾ.ಕೆ.ಬಿ.ಶ್ರುತಿ ಹೇಳಿದರು.
ಇಲ್ಲಿನ ಆಶೋಕನಗರದಲ್ಲಿರುವ ಆಕೃತಿ ಆಸ್ಪತ್ರೆ ಆವರಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಆಕೃತಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಆಸ್ಟಿಯೊಪೊರೋಸಿಸ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಟ್ಟು ನಿಂತ ಮಹಿಳೆಯಲ್ಲಿ ಮಂಡಿನೋವು, ಮೂಳೆ ದ್ರವ್ಯರಾಶಿ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. 50 ವರ್ಷ ಮೇಲ್ಪಟ್ಟ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕಾಲು ಜಾರಿ ಬಿದ್ದರೂ ಮೂಳೆ ಮುರಿತವಾಗುತ್ತದೆ. ಹೆಚ್ಚು ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಮೂಳೆಗಳಿಗೆ ಸಮೃದ್ಧ ಪೋಷಕಾಂಶ ನೀಡುವಂತಹ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟಿನ್‌ಯುಳ್ಳ ಆಹಾರ ಸೇವಿಸುವುದು ಅಗತ್ಯ. ಜತೆಗೆ ದೇಹಕ್ಕೆ ಅಗತ್ಯವಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕ್ಯಾಲ್ಸಿಯಂ ಲಭ್ಯವಾಗುತ್ತದೆ. ಆರೋಗ್ಯಯುತ ಜೀವನಶೈಲಿ ರೂಢಿಸಿಕೊಳ್ಳಬೇಕು. ಧೂಮಪಾನ, ಮದ್ಯಸೇವನೆಯಿಂದ ದೂರವಾಗಿ ಆರೋಗ್ಯಯುತ ಆಹಾರ ನಿರ್ವಹಣೆ ಮಾಡಬೇಕು ಎಂದರು.
ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಆಸ್ಟಿಯೊಪೊರೋಸಿಸ್‌ನ ಬಗ್ಗೆ ಜಾಗೃತಿ ಮೂಡಿಸಲು ಕೈ ಜೋಡಿಸಿದೆ. ಅಂಕಿ ಅಂಶದ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟ ಮೂವರು ಮಹಿಳೆಯರ ಪೈಕಿ ಒಬ್ಬರು ಮತ್ತು ಐವರು ಪುರುಷರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಪ್ರತಿ ವರ್ಷ 8.9 ದಶಲಕ್ಷ ಜನ ಮೂಳೆ ಮುರಿತಕ್ಕೆ ಒಳಗಾಗುತ್ತಿದ್ದಾರೆ. ಆತಂಕಕಾರಿ ಅಂಶವೆಂದರೆ ಶೇ.80ರಷ್ಟು ರೋಗಿಗಳು ಆಸ್ಟಿಯೊಪೊರೋಸಿಸ್‌ಗೆ ರೋಗನಿರ್ಣಯ ಚಿಕಿತ್ಸೆ ನೀಡುವುದಿಲ್ಲ. ಇದು ಈ ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೋಗದ ಪರಿಣಾಮಕಾರಿ ನಿರ್ವಹಣೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಅಲಯನ್ಸ್ ಸಂಸ್ಥೆ ಪ್ರಾಂತಪಾಲ ಮಾದೇಗೌಡ, 2ನೇ ಉಪ ಪ್ರಾಂತಪಾಲ ಚಂದ್ರಶೇಖರ್, ವೈದ್ಯರಾದ ಡಾ.ಸೋನಾಲಿ ಉಚ್ಚಿಲ್, ಡಾ.ಅವಿನಾಶ್, ಡಾ.ಸುಹಾಸ್, ಜೋಗಿಗೌಡ, ರತ್ನಮ್ಮ, ಪ್ರಮೀಳಾಕುಮಾರಿ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಅಗತ್ಯಯುಳ್ಳವರು ಮಂಡಿನೋವು, ಮೂಳೆ ದ್ರವ್ಯರಾಶಿ ತಪಾಸಣೆ ಉಚಿತವಾಗಿ ಮಾಡಲಾಯಿತು.