ಸ್ಥಳೀಯ ಸಂಸ್ಥೆ ಸದಸ್ಯರಿಗೆ ಬೆಳ್ಳಿ, ನಗದು ಕೊಡುಗೆ; ವಿಧಾನಸಭಾ ಚುನಾವಣೆಗೆ ಆನಂದ್ ಸಿಂಗ್ ಸಿದ್ಧತೆ; ದೀಪಾವಳಿ ಗಿಫ್ಟ್ ನೀಡಿ, ಪೂಜೆಗೆ ಕರೆದ ಸಚಿವ

23102022 hospet muncipal council gift
Published on

ಹೊಸಪೇಟೆ: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಪ್ರಚಾರ ಕಣ ಸಿದ್ಧಗೊಳಿಸಿದೆ. ಈಗ ಅದೇ ಪಕ್ಷದಲ್ಲಿರುವ ಸಚಿವ ಆನಂದ ಸಿಂಗ್ ಇನ್ನೂ ಒಂದೆಜ್ಜೆ ಮುಂದಿಟ್ಟಿದ್ದಾರೆ. ಮತಗಳನ್ನು ಸೆಳೆದು ತರಬಲ್ಲ ಜನಪ್ರತಿನಿಧಿಗಳಿಗೆ ಗಾಳ ಹಾಕಿದ್ದಾರೆ. ದೀಪಾವಳಿ ಹಬ್ಬದ ಹೆಸರಿನಲ್ಲಿ ಭರ್ಜರಿ ಕೊಡುಗೆ ನೀಡುವ ಮೂಲಕ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ವಿಜಯನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಹೊಸಪೇಟೆ ನಗರಸಭೆಯ ಐವರು ನಾಮನಿರ್ದೇಶಿತರು ಸೇರಿದಂತೆ 40 ಸದಸ್ಯರು, ಕಮಲಾಪುರ ಪಟ್ಟಣ ಪಂಚಾಯಿತಿಯ ಮೂವರು ನಾಮನಿರ್ದೇಶಿತರು ಸೇರಿದಂತೆ 20 ಸದಸ್ಯರು ಹಾಗೂ 10 ಗ್ರಾಪಂಗಳ 182 ಸದಸ್ಯರಿದ್ದಾರೆ. ಬಹುತೇಕ ಸದಸ್ಯರಿಗೆ ಆನಂದಸಿಂಗ್ ದೀಪಾವಳಿ ಉಡುಗೊರೆ ನೀಡಿದ್ದಾರೆ. ನಗರಸಭೆ ಸದಸ್ಯರಿಗೆ ತಲಾ ಒಂದು ಲಕ್ಷ ರೂ., ಒಂದು ಕೆಜಿ ಬೆಳ್ಳಿಗಟ್ಟಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನಹಾರ ಹಾಗೂ ಡ್ರೈಫ್ರೂಟ್ಸ್ ಬಾಕ್ಸ್‌ಗಳನ್ನು ಒಳಗೊಂಡಿರುವ ಕಿಟ್ ನೀಡಿದ್ದಾರೆ.

ಗ್ರಾಪಂ ಸದಸ್ಯರಿಗೆ ತಲಾ 27 ಸಾವಿರ ರೂ., 500 ಗ್ರಾಂ ಬೆಳ್ಳಿಗಟ್ಟಿ ನೀಡುವ ಜತೆಗೆ ದೀಪಾವಳಿ ಹಬ್ಬದಂದು ತಮ್ಮ ನಿವಾಸದಲ್ಲಿ ಆಯೋಜಿಸಿರುವ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಸಚಿವರ ಬೆಂಬಲಿಗರು ತಲುಪಿಸುತ್ತಿದ್ದಾರೆ. ಈ ಪೈಕಿ ಕೆಲ ಸದಸ್ಯರು ನಯವಾಗೇ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೇರು ಮಟ್ಟದಲ್ಲಿ ಮತಗಳನ್ನು ಕ್ರೋಡೀಕರಿಸುವ ಪ್ರಯತ್ನಕ್ಕೆ ಸಚಿವ ಆನಂದ ಸಿಂಗ್ ಮುಂದಾಗಿದ್ದಾರೆ. ಚುನಾವಣಾ ಸಂದರ್ಭ ಯಾವುದೇ ವ್ಯಕ್ತಿಗೆ ಉಡುಗೊರೆ ನೀಡುವುದು ನೀತಿಸಂಹಿತೆ ಉಲ್ಲಂಘನೆಯಾಗುತ್ತೆ ಎಂಬ ಕಾರಣಕ್ಕೆ ಈಗಲೇ ತಲುಪಿಸುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಎದುರಾಗಲಿದೆ ಎಂಬ ಕಾರಣಕ್ಕೆ ಈಗಿಂದಲೇ ಆನಂದ ಸಿಂಗ್ ತಾಲೀಮು ನಡೆಸಿದ್ದಾರೆ.

ಸಿದ್ಧಾರ್ಥ ಸಿಂಗ್ ಗ್ರಾಮ ವಾಸ್ತವ್ಯ
ಸಚಿವ ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಈಗ ಗ್ರಾಮಗಳತ್ತ ಮುಖ ಮಾಡಿದ್ದಾರೆ. ‘ಗ್ರಾಮ ವಾಸ- ಜನರ ವಿಶ್ವಾಸ’ ಹೆಸರಲ್ಲಿ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಬೆನಕಾಪುರ, ಮಲಪನಗುಡಿ, ಬಸವನದುರ್ಗ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿರುವ ಸಿದ್ಧಾರ್ಥ ಸಿಂಗ್, ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರಿಗೆ ಹತ್ತಿರುವಾಗುವ ಪ್ರಯತ್ನದಲ್ಲಿದ್ದಾರೆ.

ಸಚಿವರ ಸಂಬಂಧಿಕರೊಬ್ಬರು ತಮ್ಮ ಬಂಬಲಿಗರೊಂದಿಗೆ ಮನೆಗೆ ಬಂದು ಉಡುಗೊರೆ ತಲುಪಿಸಿದ್ದಾರೆ. ನಗರಸಭೆ ಮತ್ತು ಗ್ರಾಪಂ ಸದಸ್ಯರಿಗೂ ನೀಡುತ್ತಿರುವುದಾಗಿ ತಿಳಿಸಿದರು. ಶ್ರೀ ಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಹೊರತಾಗಿ ಗಿಫ್ಟ್‌ನಲ್ಲಿ ಎಲ್ಲೂ ಸಚಿವರ ಹೆಸರು, ಫೋಟೋ ಹಾಕಿಲ್ಲ. ಮೇಲ್ನೋಟಕ್ಕೆ ಹಬ್ಬದ ಗಿಫ್ಟ್ ಎಂದರೂ ಮುಂದಿನ ಚುನಾವಣೆ ಸಿದ್ಧತೆ ಎಂಬುದು ಸ್ಪಷ್ಟವಾಗುತ್ತದೆ.| ಹೆಸರು ಹೇಳಲು ಇಚ್ಛಿಸದ ನಗರಸಭೆ ಸದಸ್ಯ.

ನಗೇನೂ ಗೊತ್ತಿಲ್ಲಪ್ಪ : ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ದೀಪಾವಳಿ ಗಿಫ್ಟ್ ವಿಜಯವಾಣಿಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ‘ಗಿಫ್ಟ್ ಬಗ್ಗೆ ನನಗೇನೂ ಗೊತ್ತಿಲ್ಲಪ್ಪ’ ಎಂದಷ್ಟೇ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net