

ಮಂಗಳೂರು: ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರ ಸ್ಥಿತಿ ತುಸು ಸುಧಾರಣೆ ಕಂಡುಬಂದಿದೆ.
ಅವರ ಕೈಕಾಲುಗಳಲ್ಲಿ ತುಸು ಚಲನೆ ಇತ್ತು. ಆದರೆ ಇನ್ನೂ ಪ್ರಜ್ಞೆ ಮರಳಿಲ್ಲ ಎಂದು ಅವರ ಆಪ್ತವರ್ಗದವರು ತಿಳಿಸಿದ್ದಾರೆ.
ಜು.೨೨ರ ಬೆಳಗ್ಗೆ ವರೆಗೆ ಕಾದು ನೋಡಿ ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಇರುವುದನ್ನು ತೆಗೆಯಲು ಅವರನ್ನು ನೋಡಿಕೊಳ್ಳುತ್ತಿರುವ ನರರೋಗ ತಜ್ಞ ಡಾ.ರಾಜನ್ ಅವರು ತೀರ್ಮಾನಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಮಂಗಳೂರಿಗೆ ಆಗಮಿಸಿ ಆಸ್ಕರ್ ಅವರ ಆರೋಗ್ಯ ವಿಚಾರಿಸಿಕೊಂಡರು.
ಸೋಮವಾರ ಬೆಳಗ್ಗೆ ಮನೆಯಲ್ಲಿ ದೈಹಿಕ ವ್ಯಾಯಾಮ ಮಾಡುವ ವೇಳೆ ಆಸ್ಕರ್ ಅವರು ಬಿದ್ದಿದ್ದರು. ಸಂಜೆ ಆಸ್ಪತ್ರೆಗೆ ಡಯಾಲಿಸಿಸ್‌ಗಾಗಿ ಬಂದ ವೇಳೆ ವೈದ್ಯರು ತಪಾಸಣೆ ನಡೆಸಿದಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗೊತ್ತಾಗಿತ್ತು. ಆ ಬಳಿಕ ಆಸ್ಕರ್ ಅವರು ಪ್ರಜ್ಞೆ ಕಳೆದುಕೊಂಡಿದ್ದು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.