

ಕಾರಟಗಿ: ಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಡಿಸೆಂಬರ್ ಒಳಗೆ ಶ್ರೀ ನಾರಾಯಣ ಗುರು ನಿಗಮ ಮಂಡಳಿ ಸ್ಥಾಪಿಸಿ 500ಕೋಟಿ ರೂ. ಅನುದಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ಪಟ್ಟಣದ ಶ್ರೀಅಮ್ಮಾಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯುತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: ನಾರಾಯಣ ಗುರುಗಳು ಜಗತ್ತಿಗೆ ಮಾದರಿ
ಸರ್ಕಾರ ಏರ್ಪಡಿಸಿದ್ದ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ನಿಗಮ ಮಂಡಳಿ ಮತ್ತು ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅದನ್ನು ಜಾರಿಗೊಳಿಸಲು ನಾನು ಬದ್ಧನಾಗಿದ್ದೇನೆ. ಹಿಂದುಳಿದ ವರ್ಗಗಳ ಅಭಿವೃದ್ಧಿಪಡಿಸುವುದೇ ನಮ್ಮ ಸರ್ಕಾರದ ಆದ್ಯತೆ. ಅಸ್ಪೃಶ್ಯತೆ ಸೇರಿದಂತೆ ಅನೇಕ ಪೀಡುಗಗಳ ವಿರುದ್ಧ ನಾರಾಯಣ ಗುರುಗಳು ಹೋರಾಡಿ ಸಮಾಜಕ್ಕೆ ಹೊಸದಿಕ್ಕು ತೋರಿಸಿದ್ದಾರೆ.
ಅವರ ಜೀವನ ಮತ್ತು ಸಂದೇಶ ಸಮಾಜದ ಎಲ್ಲ ವರ್ಗಗಳಿಗೆ ಎಂದೆಂದಿಗೂ ಮಾದರಿ. ಅಲ್ಲದೇ ಈ ಸಮಾಜ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಜನಾರ್ಧನ ಪೂಜಾರಿ, ಆರ್.ಎಲ್.ಜಾಲಪ್ಪ, ಕೋಟಾ ಶ್ರೀನಿವಾಸ ಪೂಜಾರಿಯಂತ ಅನೇಕ ಸಜ್ಜನ ರಾಜಕೀಯ ನಾಯಕರನ್ನು ನೀಡಿದೆ. ಜತೆಗೆ ಡಾ.ರಾಜ್‌ಕುಮಾರ್, ಪುನೀತ್ ರಾಜಕುಮಾರ್ ಮತ್ತು ಕುಟುಂಬದ ಮೇರು ಕಲಾವಿದರು ಇಡೀ ದೇಶವೆ ಕನ್ನಡ ನಾಡನ್ನು ತಿರಗಿ ನೋಡುವಂತೆ ಮಾಡಿದ್ದಾರೆ. ಹಾಗಾಗಿ ಈ ಸಮಾಜ ಎಲ್ಲರ ಮೆಚ್ಚುಗೆಗೆ ಸದಾ ಪಾತ್ರವಾಗಿದೆ ಎಂದು ತಿಳಿಸಿದರು.
ಮಾಜಿಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರ ಸಮುದಾಯದ ಕುಲಕಸುಬು ನಿಷೇಧಿಸಿದಾಗ ಎಲ್ಲರೂ ಸಮಾಜದ ಹಿತದೃಷ್ಟಿಯಿಂದ ಸಹಕರಿಸಿದ್ದೇವೆ. ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಮಾಜಿಕ ಅಭಿವೃದ್ಧಿಗೆ ಆದಷ್ಟು ಬೇಗನೆ ನಿಗಮ ಮಂಡಳಿ ಸ್ಥಾಪಿಸಿ ಅನುದಾನ ನೀಡಲು ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಡಾ.ಪ್ರಣವಾನಂದ ಸ್ವಾಮೀಜಿ, ವಿಖ್ಯಾತನಂದ ಸ್ವಾಮೀಜಿ, ಮಾಜಿಶಾಸಕ ಬಸವರಾಜ ದಢೇಸುಗೂರು, ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ.ಕಾಶಿವಿಶ್ವನಾಥ, ತಾಲೂಕು ಘಟಕದ ಅಧ್ಯಕ್ಷ ವೀರೇಶ ಮರ್ಲಾನಹಳ್ಳಿ ಮಾತನಾಡಿದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಪಾಲ್ಗೊಂಡಿದ್ದರು.
ಈ ವೇಳೆ ವಿಶೇಷ ಎಪಿಎಂಸಿ ಮಾಜಿಅಧ್ಯಕ್ಷ ಬಿ.ಶಿವರೆಡ್ಡಿ ನಾಯಕ, ಜಿಪಂ ಮಾಜಿಸದಸ್ಯ ವೀರೇಶ ಸಾಲೋಣಿ, ಪ್ರಮುಖರಾದ ಚಿದಾನಂದಪ್ಪ ಈಡೀಗೇರ್, ಚನ್ನಬಸಪ್ಪ ಸುಂಕದ್, ನರಾಲ ಶ್ರೀನಿವಾಸ, ರೆಡ್ಡಿ ಶ್ರೀನಿವಾಸ, ಬೂದಿ ಗಿರಿಯಪ್ಪ, ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳಾದ ತುಕಾರಾಮಪ್ಪ ಕಲಕೇರಿ, ಶ್ರೀಕಾಂತ ಮರ್ಲಾನಹಳ್ಳಿ, ಕೆ.ಶ್ರೀಹರಿ ಇತರರಿದ್ದರು.