ತಬ್ಬಲಿ ಕರುವಿಗೆ ನಾಮಕರಣ, ತೊಟ್ಟಿಲು ಶಾಸ್ತ್ರ...!!

Shiva Lead
Published on

ಉಡುಪಿಯಲ್ಲಿ ಟೈಗರ್​ ಶಿವನ ಮೆರವಣಿಗೆ

ಗೋ ಪ್ರೇಮ ಮೆರೆದ ಸಾರ್ವಜನಿಕರು

ವಿಜಯವಾಣಿ ಸುದ್ದಿಜಾಲ ಉಡುಪಿ

ಮಗುವಿಗೆ ನಾಮಕರಣ ಶಾಸ್ತ್ರ ಮಾಡುವ ರೀತಿಯಲ್ಲೇ ಮಣಿಪಾಲದಲ್ಲಿ ತಬ್ಬಲಿ ಗಂಡು ಕರುವಿಗೆ ನಾಮಕರಣ ಹಾಗೂ ತೊಟ್ಟಿಲು ಶಾಸ್ತ್ರ ಮಾಡುವ ಮೂಲಕ ಜನರು ಗೋ ಪ್ರೇಮ ಮೆರೆದಿದ್ದಾರೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಮಣಿಪಾಲ ಶಾಂತಿನಗರದಲ್ಲಿರುವ ನಿಮ್ಮ ಮನೆ ಅಂಗಳದಲ್ಲಿ ಮಾ.12ರಂದು ಗೋಧೂಳಿ ಲಗ್ನದಲ್ಲಿ ಅನಾಥ ಗಂಡು ಕರುವಿಗೆ ನಾಮಕರಣ ಹಾಗೂ ತೊಟ್ಟಿಲು ಶಾಸ್ತ್ರ ಮಾಡುವ ಮೂಲಕ ಗಮನ ಸೆಳೆದಿದೆ.

ಭಜನೆ, ಮೆರವಣಿಗೆ

ಶಾಂತಿನಗರದ ಗಣೇಶೋತ್ಸವ ಸಭಾಭವನದಿಂದ ತೊಟ್ಟಿಲು ಶಾಸ್ತ್ರ ನಡೆಯುವ ಮಂಟಪದವರೆಗೆ ಹೊಸಬಟ್ಟೆ, ಹೂವುಗಳಿಂದ ಸಿಂಗರಿಸಿದ್ದ ಕರುವನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಸೀತಾರಾಮ ಮಹಿಳಾ ಭಜನಾ ಮಂಡಳಿ ಉಡುಪಿ ಹಾಗೂ ಮಂಚಿ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಜನೆ ಮಾಡುವ ಮೂಲಕ ಮೆರವಣಿಗೆಗೆ ಮೆರಗು ತಂದರು.

ಟೈಗರ್​ ಶಿವ ನಾಮಕರಣ

ಕಳೆದ ಶಿವರಾತ್ರಿಯ ದಿನದಂದೇ ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೈಗರ್​ ಸರ್ಕಲ್​ನಲ್ಲಿ ಕರು ಜನಿಸಿದ್ದರಿಂದ 'ಟೈಗರ್​ ಶಿವ' ಎಂದು ನಾಮಕರಣ ಮಾಡಲಾಯಿತು. ಕರುವಿಗೆ ಲಾಲಿ ಹಾಡಲಾಯಿತು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವ ವಹಿಸಿದ್ದರು.

ಸಾರ್ವಜನಿಕರ ಸಹಭಾಗಿತ್ವ

ಕರುವಿನ ನಾಮಕರಣದಲ್ಲಿ ಪಶುವೈದ್ಯರಾದ ಡಾ. ಸಂದೀಪ್​ ಶೆಟ್ಟಿ ಉದ್ಯಾವರ, ಡಾ. ಪ್ರಶಾಂತ ಶೆಟ್ಟಿ ಮಣಿಪಾಲ, ಸಾಹಿತಿ ಹರಿಕೃಷ್ಣ ರಾವ್​ ಸಗ್ರಿ, ನಿರ್ಮಲಾ ಹರಿಕೃಷ್ಣ ರಾವ್​, ಉದ್ಯಮಿ ಉದಯ ಕುಮಾರ್​, ಧರ್ಮಸ್ಥಳ ಭಜನಾ ಪರಿಷತ್​ ಉಡುಪಿ ತಾಲೂಕು ಘಟಕದ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಹೊಸಬದುಕು ಆಶ್ರಮದ ಸಂಚಾಲಕ ವಿನಯಚಂದ್ರ ಸಾಸ್ತಾನ, ರಾಜಶ್ರೀ, ನಾಗರಿಕ ಸಮಿತಿಯ ಸಹಸಂಚಾಲಕರಾದ ತಾರಾನಾಥ್​ ಮೇಸ್ತ ಶಿರೂರು, ಕೆ.ಬಾಲಗಂಗಾಧರ್​ ರಾವ್​, ಸದಸ್ಯರಾದ ಸತೀಶ್​ ಕುಮಾರ್​ ಇತರರು ಪಾಲ್ಗೊಂಡಿದ್ದರು.

ಅನೇಕರಿಂದ ಕೊಡುಗೆ

ನಾಗರಾಜ ಶೆಟ್ಟಿ ಶಾಮಿಯಾನ ವ್ಯವಸ್ಥೆ, ಜಹಾಂಗೀರ್​ ಭಟ್ಟರಿಂದ ಉಚಿತ ಉಪಹಾರ, ಫ್ಲವರ್ ವಿಷ್ಣು ಅವರಿಂದ ಹೂವಿನಲಂಕಾರ, ಶೋಭಾ ಕುಮಾರ್​ ಶೆಟ್ಟಿ ಅವರು ಹಿತ್ತಾಳೆಯ ತೊಟ್ಟಿಲು ನೀಡಿದ್ದರು.

ಕರುವಿನ ಹೆತ್ತಬ್ಬೆ ಬೀಡಾಡಿ ದನವಾಗಿತ್ತು. ಮಣಿಪಾಲದ ಟೈಗರ್​ ಸರ್ಕಲ್​ ಬಳಿ ಶಿವರಾತ್ರಿ ದಿನದಂದೇ ಗಂಡು ಕರು ಜನಿಸಿತ್ತು. ಆದರೆ, ಮಾತೃಪ್ರೇಮ ತೋರಿ ಹಾಲುಣಿಸಬೇಕಿದ್ದ ದನ ಸ್ಥಳದಿಂದ ನಾಪತ್ತೆಯಾಗಿತ್ತು. ಕರುವಿನ ಪ್ರಾಣಕ್ಕೂ ಸಂಚಕಾರ ಎದುರಾಗಿದ್ದರಿಂದ ತಬ್ಬಲಿ ಕರುವನ್ನು ಮನೆಗೆ ಕಂಡೊಯ್ದು, ಪಶುವೈದ್ಯರ ಸಲಹೆಯಂತೆ ಬಾಟಲಿ ಮೂಲಕ ಹಾಲುಣಿಸಿದೆ. ಬಳಿಕ ಉಡುಪಿಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಕರುವಿನ ಪೋಷಣೆಗೆ ವ್ಯವಸ್ಥೆ ಮಾಡಿದೆ. ನಮಗೆಲ್ಲ ನಾಮಕರಣ ಮಾಡುವ ರೀತಿಯಲ್ಲಿಯೇ ತಬ್ಬಲಿಯ ಕರುವಿಗೂ ಸಹ ವೈದ್ಯರು, ಸಾಹಿತಿಗಳು, ಭಜನಾ ಪರಿಷತ್ತಿನವರು ಹಾಗೂ ಸಾರ್ವಜನಿಕರೊಂದಿಗೆ ಒಡಗೂಡಿ ಟೈಗರ್ ಶಿವ ಎಂದು ನಾಮಕರಣ ಮಾಡಿದ್ದೇವೆ. | ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net