

ಕಾರವಾರ/ಜೊಯಿಡಾ: ಗೋವಿನ ಕತೆ ಭಾರತದಲ್ಲಿ ಪ್ರಸಿದ್ಧ ಹುಲಿಗೆ ಆಹಾರವಾಗ ಹೊರಟ ಗೋವು ತನ್ನ ಕರುವನ್ನು ಕರೆದು, "ತಬ್ಬುಲಿಯು ನೀನಾದೆ ಮಗುವೆ, ಹೆಬ್ಬುಲಿಯ ಬಾಯನ್ನು ಪೊಗುವೆನು" ಎಂದು ಹೇಳುತ್ತದೆ. ಆದರೆ, ಇಲ್ಲಿ ಸನ್ನಿವೇಶ ಅದಲು, ಬದಲಾಗಿದೆ. ಹುಲಿಯ ಮರಿಯೊಂದು ತಬ್ಬಲಿಯಾಗಿದೆ. ತಾಯಿ ಹೆಬ್ಬುಲಿ ಕಾಣೆಯಾಗಿದೆ!!
ತಾಯಿಯಿಂದ ಬೇರ್ಪಟ್ಟು ತಬ್ಬಲಿಯಾದ ಹುಲಿ ಮರಿಯೊಂದು ಶುಕ್ರವಾರ ರಾತ್ರಿ ಜನವಸತಿ ಪ್ರದೇಶದಲ್ಲಿ ಸಿಕ್ಕಿದ್ದು, ರಕ್ಷಣೆಗೆ ಅರಣ್ಯ ಇಲಾಖೆ ವಿವಿಧ ರೀತಿಯ ಪ್ರಯತ್ನ ನಡೆಸಿದೆ.
ಪ್ರಧಾನಿ ಗ್ರಾಮದಲ್ಲಿ ಜನ ವಾಸವಿರದ ಮನೆಯೊಂದರ ಹಿಂದೆ ಶುಕ್ರವಾರ ಹುಲಿ ಮರಿ ಕಂಡುಬಂದಿತ್ತು. ರಾತ್ರಿ ಅದನ್ನು ಹಳಿಯಾಳ ವಿಭಾಗದ ವಿರ್ನೋಲಿ ವಲಯದ ಅಽಕಾರಿಗಳು ಅದನ್ನು ಬೋನ್‌ನಲ್ಲಿ ಹಾಕಿ ರಕ್ಷಿಸಿ ಕರೆದೊಯ್ದು ಆರೈಕೆ ಮಾಡುತ್ತಿದ್ದಾರೆ. ಮರಿಗೆ ಸುಮಾರು 4 ರಿಂದ 5 ತಿಂಗಳ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಏಳೆಂಟು ದಿನಗಳಿಂದ ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಅಮ್ಮನ ಹಾಲಿಲ್ಲದೇ ಹೊಟ್ಟೆ ಸಣ್ಣದಾಗಿದ್ದು, ಗಾಬರಿಗೊಂಡ ಸ್ಥಿತಿಯಲ್ಲಿ ಮರಿಯಿದೆ. ತಾಯಿ ಹುಲಿ ಮೃತಪಟ್ಟು ಅಥವಾ ಬರ‍್ಯಾವುದೋ ಕಾರಣಕ್ಕೆ ಅದರಿಂದ ದೂರವಾಗಿರಬಹುದು ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯಪಟ್ಟಿದ್ದಾರೆ.
ಆಕಳ ಹಾಲು ಕೊಡುವಂತಿಲ್ಲ:
ತಾಯಿಯಿಂದ ಬೇರ್ಪಟ್ಟ ಕಡವೆ ಮರಿ ಸಿಕ್ಕರೆ ಆಕಳ ಹಾಲು ಕೊಟ್ಟು ಅದನ್ನು ಸಾಕಬಹುದು. ಹುಲಿ ಮರಿಗೆ ಆಕಳು ಹಾಲು ಕೊಡುವುದು ಮಕ್ಕಳ ಕತೆಗಳಲ್ಲಿ ಮಾತ್ರ ಸಾಧ್ಯ. ಅವುಗಳಿಗೆ ಆಕಳ ಹಾಲು ನೇರವಾಗಿ ಕೊಟ್ಟರೆ ಜೀರ್ಣವಾಗುವುದಿಲ್ಲ ಎನ್ನುತ್ತಾರೆ ವನ್ಯಜೀವಿ ತಜ್ಞರು. ಸಾಮಾನ್ಯವಾಗಿ ಹುಲಿ ಮರಿಗಳು 8 ರಿಂದ 10 ವಾರದವರೆಗೆ ತಾಯಿಯ ಹಾಲನ್ನೇ ಕುಡಿಯುತ್ತವೆ. ನಂತರ ನಿಧಾನವಾಗಿ ತಾಯಿ ಬೇಟೆಯಾಡುವ ಮಾಂಸ ತಿನ್ನಲು ಶುರು ಮಾಡುತ್ತವೆ. ಸುಮಾರು 6 ತಿಂಗಳಾದರೂ ಅದಕ್ಕೆ ತಾಯಿಯ ಹಾಲು ಬೇಕೇ ಬೇಕು.
ಪ್ರಧಾನಿ ಗ್ರಾಮದಲ್ಲಿ ಸಿಕ್ಕ ಹುಲಿ ಮರಿ ಇನ್ನೂ ಸಣ್ಣದಾಗಿದ್ದು, ಮಾಂಸವನ್ನು ಸಾಕಷ್ಟು ತಿನ್ನುವಷ್ಟು ರೂಢಿ ಇಲ್ಲ. ಹಾಲು ಕುಡಿಸಲು ತಾಯಿ ಇಲ್ಲ. ಇದು ಅರಣ್ಯಾಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಎಸ್‌ಒಪಿಯನ್ನು ಪರಿಶೀಲಿಸಿ, ವನ್ಯಜೀವಿ ವೈದ್ಯರ ಸಲಹೆ ಪಡೆದು, ಅದಕ್ಕೆ ಆಡಿನ ಹಾಲನ್ನು ಸ್ವಲ್ಪ, ಸ್ವಲ್ಪವೇ ಕುಡಿಸಲಾಗಿದೆ ಅಲ್ಲದೇ ಮಾಂಸವನ್ನೂ ಅಲ್ಪ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 24 ಗಂಟೆಗೂ ಹೆಚ್ಚು ಕಾಲ ಮನೆಯೊಂದರಲ್ಲಿ ಕಾಲ ಕಳೆದ ಚಿರತೆ
ತಾಯಿಗಾಗಿ ಹುಡುಕಾಟ
ಮರಿಯನ್ನು ತಾಯಿಯ ಜತೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ. ಪ್ರಧಾನಿ ಗ್ರಾಮದ ವಿವಿಧೆಡೆ ಕ್ಯಾಮರಾಗಳನ್ನು ಅಳವಡಿಸಿ, ಹುಲಿಯ ಓಡಾಟ ಗಮನಿಸಲಾಗುತ್ತಿದೆ. ಅಲ್ಲದೆ, ಆ ಭಾಗದ ಸಾಕಷ್ಟು ಅರಣ್ಯ ಸಿಬ್ಬಂದಿ ತಾಯಿ ಹುಲಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ತಾಯಿ ಕಾಣಿಸಿದರೆ, ಮರಿಯನ್ನು ಅದರೊಟ್ಟಿಗೆ ಬಿಡಲು ಸಿದ್ಧತೆ ನಡೆಸಲಾಗಿದೆ. ತಾಯಿ ಸಿಗದೇ ಇದ್ದರೆ ಅದನ್ನು ಮುಂದೆ ಹೇಗೆ ಸಾಕಬೇಕು ಎಂದು ಹಿರಿಯ ಅಽಕಾರಿಗಳ, ವನ್ಯಜೀವಿ ತಜ್ಞರ ನಿರ್ದೇಶನ ಪಡೆದು ಕ್ರಮ ವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪಶು ವೈದ್ಯರ ಸಲಹೆಯಂತೆ ಆಡಿನ ಹಾಲನ್ನು ಹುಲಿ ಮರಿಗೆ ಕುಡಿಸಲಾಗಿದೆ. ಮಾಂಸವನ್ನೂ ನೀಡಲಾಗಿದೆ. ಅದು ಎಲ್ಲವನ್ನೂ ಸೇವಿಸಿದ್ದು. ಆರೋಗ್ಯವಂತವಾಗಿದೆ. ಹುಲಿ ಮರಿಯನ್ನು ತಾಯಿಯ ಜತೆ ಸೇರಿಸುವ ಎಲ್ಲ ಪ್ರಯತ್ನ ನಡೆದಿದೆ.ವಸಂತ ರೆಡ್ಡಿಸಿಸಿಎಫ್, ಕೆನರಾ ವೃತ್ತ