

ಹುಬ್ಬಳ್ಳಿ: ಗಾಯಗೊಂಡ ಕಾಲು.. ನೋವುಂಡ ಮುಖ.. ಜೀವನವೇ ಸಾಕಾಗಿ ಹೋಗಿದೆ ಎಂಬಂತೆ ಒಂದೊಂದೇ ಹೆಜ್ಜೆ ಇಡುತ್ತಿರುವ ಸಣಕಲು ದೇಹ. ಹುಬ್ಬಳ್ಳಿ-ಧಾರವಾಡ ಅವಳಿನಗರದ ವಿವಿಧ ಭಾಗಗಳಲ್ಲಿ ಅನಾಥವಾಗಿ ತಿರುಗಿಕೊಂಡಿರುವ ಕುದುರೆಗಳ ಕರುಣಾಜನಕ ಸ್ಥಿತಿ ಇದು. ಕುದುರೆಗಳು ಅಂದರೆ ಶಕ್ತಿ-ಸಾಮರ್ಥ್ಯದ ಪ್ರತೀಕ. ಇಂತಹ ಕುದುರೆಗಳು ನಡೆಯಲಾಗದ ದಯನೀಯ ಸ್ಥಿತಿ ತಲುಪಿವೆ.
ಹೌದು. ಹುಬ್ಬಳ್ಳಿಯ ಗೋಪನಕೊಪ್ಪ, ಬೆಂಗೇರಿ, ಕುಸುಗಲ್ಲ ರಸ್ತೆ, ಕೇಶ್ವಾಪುರ, ಗೋಕುಲ, ಅಮರಗೋಳ, ಕೋರ್ಟ್ ಸರ್ಕಲ್ ಹಾಗೂ ಧಾರವಾಡದ ಹೊಸಯಲ್ಲಾಪುರ, ಹೆಬ್ಬಳ್ಳಿ ರಸ್ತೆ, ಕಲಘಟಗಿ ರಸ್ತೆ ಸೇರಿ ವಿವಿಧ ಭಾಗಗಳಲ್ಲಿ ಇಂತಹ ಕುದುರೆಗಳು ಕಾಣಿಸುತ್ತವೆ. ಆದರೆ, ಈ ಕುದುರೆಗಳು ಯಾರಿಗೆ ಸೇರಿದವು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. ಬಿಡಾಡಿ ದನಗಳ ಜತೆಗೂ ಕುದುರೆಗಳು ಸೇರ್ಪಡೆಯಾಗಿವೆ.
ನಗರದಲ್ಲೇಕೆ ಹಿಂಡು?: ಬೆಳಗಾವಿ, ಚಿಕ್ಕೋಡಿ, ಗೋಕಾಕ, ರಾಯಭಾಗ ಮತ್ತಿತರ ಭಾಗಗಳಿಂದ ಬೇಸಿಗೆ ಸಮಯದಲ್ಲಿ ವಲಸೆ ಬರುವ ಕುರಿಗಾಹಿಗಳು, ಕುರಿ ಹಿಂಡಿನ ಜತೆ ಕನಿಷ್ಠ ನಾಲ್ಕೈದು ಕುದುರೆ ತರುವುದು ಸಾಮಾನ್ಯ. ಟೆಂಟ್ ಸಾಮಗ್ರಿ, ದವಸ-ಧಾನ್ಯ ಕುದುರೆಗಳ ಮೇಲೆ ಹೇರಿಕೊಂಡು ಹೋಗುತ್ತಾರೆ. ಪದೇಪದೆ ಸ್ಥಳಾಂತರ ಆಗುವುದರಿಂದ ಕುದುರೆ ಮೇಲೆ ಸಾಮಗ್ರಿ ಹೇರುವುದು, ಇಳಿಸಬೇಕು. ಕುರಿಗಾಹಿಗಳು ರಿಕ್ಷಾ, ಟಂಟಂ ಹಾಗೂ ಗೂಡ್ಸ್ ವಾಹನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಸ್ಥಳಾಂತರವಾದಾಗ ಸಾಮಾನು ಇಳಿಸುವ ತಾಪತ್ರಯ ತಪ್ಪಿದೆ. ವಾಹನ ವ್ಯವಸ್ಥೆ ಮಾಡಿಕೊಂಡವರಿಗೆ ಕುದುರೆಗಳ ಅಗತ್ಯ ಕುರಿಗಾಹಿಗಳಿಗೆ ಇಲ್ಲದಾಗಿದೆ. ಹೀಗಾಗಿ, ನಗರದ ಸುತ್ತಮುತ್ತ ಬಿಟ್ಟು ಹೋಗಲಾಗುತ್ತದೆ. ಅನಾರೋಗ್ಯ ಪೀಡಿತ, ವಯಸ್ಸಾದ, ಅಪಘಾತಕ್ಕೀಡಾದ ಹಾಗೂ ಬಿದ್ದು ಗಾಯಗೊಂಡ ಕುದುರೆಗಳನ್ನು ಬಿಟ್ಟು ಹೋಗುತ್ತಾರೆ.
ರಸ್ತೆಗಳಲ್ಲಿ ಓಡಾಡುವುದರಿಂದ ಆಗಾಗ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನ ಡಿಕ್ಕಿ ಹೊಡೆದು ಕುದುರೆಗಳು ಗಾಯಗೊಂಡ ಘಟನೆಗಳು ಅನೇಕ ಬಾರಿ ನಡೆದಿವೆ. ಆದರೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ಉಪಚರಿಸುವವರು ಇಲ್ಲದಾಗಿದೆ. ಹೀಗಾಗಿ, ಕಾಲು ಮುರಿದ, ತೀವ್ರ ಗಾಯಗೊಂಡ ಕುದುರೆಗಳು ಅಲ್ಲಿಯೇ ನರಳಿ ಸಾಯುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಧಾರವಾಡದ ಸೋಮಶೇಖರ ಚನ್ನಶೆಟ್ಟಿ, ‘ನಾವು ಸಾಕುಪ್ರಾಣಿಗಳ ಕಷ್ಟಕ್ಕೆ ಮಿಡಿಯಲು ಸಿದ್ಧರಿದ್ದೇವೆ. ಅನೇಕರು ಪ್ರಾಣಿಗಳ ಚಿಕಿತ್ಸೆಗೆ ನೆರವಾಗಿದ್ದಾರೆ. ಹಲವು ಬಾರಿ ಮನೆಗೆ ಪ್ರಾಣಿ ಕರೆದೊಯ್ದು ಚಿಕಿತ್ಸೆ ನೀಡಿದ್ದೇನೆ. ಗಾಯಗೊಂಡ ಪ್ರಾಣಿಗಳ ಕೂಗಾಟದಿಂದ ಪಕ್ಕದ ಮನೆಯವರು ತಕರಾರು ತೆಗೆದ ಪ್ರಸಂಗಗಳು ನಡೆದಿವೆ. ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ, ಬಿಡಾಡಿ ದನ, ಕುದುರೆ, ಇತರ ಪ್ರಾಣಿಗಳು ಗಾಯಗೊಂಡ ಮಾಹಿತಿ ನೀಡಿದರೆ, ನೀವೇ ಅವುಗಳಿಗೆ ಉಪಚರಿಸಿ ಎಂದು ಬಿಟ್ಟಿ ಸಲಹೆ ನೀಡುತ್ತಾರೆ. ಈ ಹಿಂದೆ ವಾರಸುದಾರರಿಲ್ಲದ ಸಾಕುಪ್ರಾಣಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಪಾಲಿಕೆ ಹೇಳಿತ್ತು. ಆದರೆ, ಈವರೆಗೆ ಕ್ರಮವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ನೂರಾರು ಸಂಖ್ಯೆಯಲ್ಲಿರುವ ಅನಾಥ ಕುದುರೆಗಳಿಗೆ ಸೂಕ್ತ ವ್ಯವಸ್ಥೆಯಾಗಬೇಕಿದೆ. ಗೋವುಗಳ ಸಾಕಣೆಗೆ ಪಾಂಜರಪೋಳ ಇರುವಂತೆ ಕುದುರೆಗಳ ಸಾಕಣೆಗೆ ವ್ಯವಸ್ಥೆಯಾಗಬೇಕು ಎಂಬುದು ಪ್ರಾಣಿಪ್ರಿಯರ ಒತ್ತಾಯವಾಗಿದೆ.
ಬಿಡಾಡಿ ದನ, ಕುದುರೆಗಳಿಂದ ತೊಂದರೆ ಉಂಟಾದಾಗ ಸಾರ್ವಜನಿಕರು ಪಾಲಿಕೆ ಸಹಾಯವಾಣಿಗೆ (0836-2213888) ಕರೆ ಮಾಡಿ ದೂರು ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ಡಾ. ಶ್ರೀಧರ ದಂಡಪ್ಪನವರಆರೋಗ್ಯಾಧಿಕಾರಿ ಹು-ಧಾ ಮಹಾನಗರ ಪಾಲಿಕೆ
ವಾರಸುದಾರರಿಲ್ಲದ ಸಾಕು ಪ್ರಾಣಿಗಳಿಗಾಗಿ ಹುಬ್ಬಳ್ಳಿ, ಧಾರವಾಡ ನಗರಕ್ಕೆ ಪ್ರತ್ಯೇಕ ಆಶ್ರಯ ಕೇಂದ್ರ ಆರಂಭಿಸಬೇಕು. ನಗರದ ಹೊರವಲಯದಲ್ಲಿನ ಬಂಜರು ಭೂಮಿಯಲ್ಲಿ ಆಶ್ರಯ ಕೇಂದ್ರ ಸ್ಥಾಪಿಸಿ, ವೈದ್ಯರು ಹಾಗೂ ಸಿಬ್ಬಂದಿ ನೇಮಕದ ಜತೆಗೆ ಪ್ರಾಣಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ, ಸಾಗಣೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು.| ಸೋಮಶೇಖರ ಚನ್ನಶೆಟ್ಟಿಪ್ರಾಣಿಪ್ರಿಯ ಧಾರವಾಡ