ಮೌಲ್ಯಯುತ ಜೀವನ ಕ್ರಮ ಅಳವಡಿಸಿಕೊಳ್ಳಲಿ: ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಕಿವಿಮಾತು

Orientation program for students at PES College Mandya
Published on

ಮಂಡ್ಯ: ಪ್ರತಿ ವಿದ್ಯಾರ್ಥಿಯು ಗುರು ಹಿರಿಯರು, ಪಾಲಕರನ್ನು ಗೌರವಿಸುವ ಜತೆಗೆ ಹುಟ್ಟೂರಿನ ಬಗ್ಗೆ ಮಮತೆ ತೋರುವ ಮೌಲ್ಯಯುತ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದು ಜನತಾ ಶಿಕ್ಷಣ ಟ್ರಸ್ಟ್(ಪಿಇಟಿ) ಅಧ್ಯಕ್ಷ ಕೆ.ಎಸ್.ವಿಜಯಾನಂದ ಕಿವಿಮಾತು ಹೇಳಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಹಾಗೂ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡ ಅಭಿನಂದನೆ ಸಲ್ಲಿಸುತ್ತೇನೆ. ವಿದ್ಯಾರ್ಥಿಗಳು ತಮ್ಮ ಜೀವನ ಕ್ರಮದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಪಾಲಕರ ಆರ್ಥಿಕ ಸಂಕಷ್ಟದ ಅರಿವಿರಬೇಕು. ಮೊಬೈಲ್ ಹಾಗೂ ಬೈಕ್ ವ್ಯಾಮೋಹವನ್ನು ಮಿತಿಯಾಗಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.

ಕಲಿಕೆ ಎಂದಿಗೂ ನಾಶವಾಗುವುದಿಲ್ಲ ಎಂಬ ಸತ್ಯವನ್ನು ಅರಿತು ಅನ್ಯ ಮಾರ್ಗದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ಪ್ರೌವೃತ್ತಿಯಿಂದ ದೂರವಿರಬೇಕು. ನಿತ್ಯಸಚಿವ ಕೆ.ವಿ.ಶಂಕರಗೌಡ ಹಾಗೂ ಅವರ ಬಳಗದ ವತಿಯಿಂದ 1962ರಲ್ಲಿ ನಿರ್ಮಾಣಗೊಂಡಿರುವ ಪಿಇಟಿ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಡಾ.ಎಚ್.ಡಿ.ಚೌಡಯ್ಯ ಅವರ ದೂರದೃಷ್ಠಿಯಿಂದ ಕ್ಯಾಂಪಸ್‌ನಲ್ಲಿ ಅತ್ಯುತ್ತಮ ಕ್ರೀಡಾ ಸೌಲಭ್ಯವಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಿ. ಕ್ರೀಡಾಸಕ್ತಿಯನ್ನು ವೃದ್ದಿಸುವ ಸದುದ್ದೇಶದಿಂದ ದೈಹಿಕ ಶಿಕ್ಷಣ ನಿರ್ದೇಶಕರನ್ನು ನಿಯೋಜಿಸಿ ಇತರೆ ಇಂಜಿಯರಿಂಗ್ ಕಾಲೇಜಿಗೆ ನಾವು ಮಾದರಿಯಾಗಿದ್ದೇವೆ. ಭವಿಷ್ಯದಲ್ಲಿ ಏರ್‌ಪೋರ್ಸ್ ಸಂಬಂಧಿತ ಕೋರ್ಸ್ ಆರಂಭಿಸಲಾಗುವುದು ಎಂದರು.

ಹಾರ್ಮನ್ ಇಂಟರ್‌ನ್ಯಾಷನಲ್ ಸಂಸ್ಥೆಯ ಆರ್ ಆ್ಯಂಡ್ ಡಿ ವಿಭಾಗದ ಮುಖ್ಯಸ್ಥ ಜಿ.ಕೃಷ್ಣಕುಮಾರ್ ಮಾತನಾಡಿ, ಪ್ರತಿ ವಿದ್ಯಾರ್ಥಿ ಜೀವನ ಮೌಲ್ಯವನ್ನು ವೃದ್ದಿಸಿಕೊಳ್ಳಬೇಕು. ಕೌಶಲತೆ ವೃದ್ದಿಸಿಕೊಳ್ಳುವ ಜತೆಗೆ ನಿಷ್ಠೆ, ಪ್ರಾಮಾಣಿಕತೆ ಹಾಗೂ ಆಸಕ್ತಿಯನ್ನು ರೂಢಿಸಿಕೊಳ್ಳಬೇಕು. ಕೆ.ವಿ.ಶಂಕರಗೌಡರು ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಸರ್ಕಾರ ಚಿಕಿತ್ಸಾ ವೆಚ್ಚ ಪಾವತಿಗೆ ಮುಂದಾಗಿತ್ತು. ಆ ವೇಳೆ ಸಾರ್ವಜನಿಕ ತೆರಿಗೆ ಹಣ ಬಳಸುವುದು ಬೇಡವೆಂದು ನಿರಾಕರಿಸಿ ಸಾಲ ಮಾಡಿ ಚಿಕಿತ್ಸಾ ವೆಚ್ಚ ಪಾವತಿಸಿ ಮಾದರಿಯಾಗಿದ್ದರು. ಅಂತಹ ಆದರ್ಶಗಳ ಪಾಲನೆಯಾಗಬೇಕಿದೆ. ಪ್ರತಿ ವಿದ್ಯಾರ್ಥಿಯು ಇಚ್ಛಾಶಕ್ತಿ, ಜ್ಞಾನಾಸಕ್ತಿ, ಕ್ರಿಯಾಶಕ್ತಿ ರೂಢಿಸಿಕೊಳ್ಳಬೇಕು. ಯಶಸ್ಸು ಸುಲಭದ ತುತ್ತಲ್ಲ, ನಿರಂತರ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕಲಿಕಾಸಕ್ತಿ ಹಾಗೂ ವ್ಯಕ್ತಿತ್ವಾಭಿವೃದ್ದಿಗೆ ಲಭ್ಯವಿರುವ ಅವಕಾಶಗಳನ್ನು ಪರಿಚಯಿಸಿ ತಮ್ಮ ಶೈಕ್ಷಣಿಕ ಪಯಣವನ್ನು ಉತ್ತಮ ದೃಷ್ಠಿಕೋನದೊಂದಿಗೆ ಆರಂಭಿಸಲು ದಿಕ್ಸೂಚಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿತ್ಯ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೆ.ವಿ.ಶಂಕರಗೌಡರ ದೂರದೃಷ್ಠಿಯಿಂದ ಕಾರ್ಯಾರಂಭ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಗ್ರಾಮೀಣ ರೈತ ಪ್ರತಿಭೆಗಳ ಆಶಾಕಿರಣವಾಗಿ ಹೊರಹೊಮ್ಮಿದೆ. ಮಾತ್ರವಲ್ಲದೆ ರಾಜ್ಯದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಎದುರಾಗುತ್ತಿರುವ ಸವಾಲು, ನಾವಿನ್ಯತೆಗಳನ್ನು ಉತ್ತಮ ಪೈಪೋಟಿಯಲ್ಲಿ ಎದುರಿಸಲು ಅಗತ್ಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆ.ಎಸ್.ವಿಜಯಾನಂದ ಅವರ ದೂರದೃಷ್ಟಿ ಸಂಸ್ಥೆಗೆ ತೇಜಸ್ಸು ಮತ್ತು ಶಕ್ತಿ ತುಂಬಿದೆ ಎಂದರು.

ತಾಂತ್ರಿಕ ಶಿಕ್ಷಣದ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಯು ವಿಶ್ವಸಂಸ್ಥೆ 18 ಕೋಟಿ ರೂ. ಅನುದಾನ ಹಾಗೂ ರಾಷ್ಟ್ರದಲ್ಲಿರುವ 6 ಸಾವಿರ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 201/300 ರ‌್ಯಾಂಕಿಂಗ್ ಕ್ರಮಾಂಕದಲ್ಲಿದೆ. ನ್ಯಾಕ್ ಪಟ್ಟಿಯಲ್ಲಿ ಎ ಗ್ರೇಡ್ ಸಾಧನೆ ಮಾಡಿದೆ. ಆಟೋಮೊಬೈಲ್ ಸೇರಿದಂತೆ ಹಲವು ಕೋರ್ಸ್‌ಗಳ ಸಂಶೋಧನೆ ಹಾಗೂ ನಾವಿನ್ಯತೆಗೆ ಬಲ ತುಂಬಲಾಗಿದೆ. ಐಐಟಿ ಮತ್ತು ಎನ್‌ಐಟಿಯ ಪಠ್ಯೇತರ ಚಟುವಟಿಕೆಯಲ್ಲಿ ನಮ್ಮ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ಭಾಗಿಯಾಗುತ್ತಿರುವುದು ಹಾಗೂ ಕ್ರೀಡಾ ಉತ್ತೇಜನದ ಮೂಲಕ ಯುವಶಕ್ತಿಯನ್ನು ಪ್ರೇರೇಪಿಸುವುದು ಮತ್ತು ಸಧೃಡ ಯುವ ಜನಾಂಗಕ್ಕೆ ಅಗತ್ಯ ಉದ್ಯೋಗ ಒದಗಿಸುವ ಹೆಗ್ಗುರಿ ನಮ್ಮ ಸಂಸ್ಥೆಯದ್ದಾಗಿದೆ ಎಂದು ವಿವರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಡಾ.ಎನ್.ಎಲ್.ಮುರುಳಿಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net