ಸಂಶೋಧನೆಯತ್ತ ವಿದ್ಯಾರ್ಥಿಗಳು ಗಮನಹರಿಸಲಿ: ಎಐಸಿಟಿ ನಿರ್ದೇಶಕ ಪ್ರೊ. ಸಂಗಮೇಶ್ವರ್ ಕಿವಿಮಾತು

Orientation Program at Caveri Technical College mandya
Published on

ಮಂಡ್ಯ: ಮಾನವ ಅಭಿವೃದ್ಧಿಗೆ ಸಂಶೋಧನೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಈ ನಿಟ್ಟಿನಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಎಐಸಿಟಿ ನಿರ್ದೇಶಕ ಪ್ರೊ. ಸಂಗಮೇಶ್ವರ್ ಸಲಹೆ ನೀಡಿದರು.

ನಗರದ ಹೊರವಲಯದ ಕಾವೇರಿ ತಾಂತ್ರಿಕ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಸಂಶೋಧನೆಯಿಂದಲೇ ತಾಂತ್ರಿಕತೆ ಬೆಳೆದು ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಹೆಚ್ಚಾಗಿ ಸಂಶೋಧನೆಯತ್ತ ಗಮನಹರಿಸುವುದು ಅತ್ಯವಶ್ಯಕ. ವಿದ್ಯಾರ್ಥಿಗಳು ಸುಳ್ಳು ಹೇಳುವುದನ್ನು ಬಿಡಬೇಕು. ಅದಕ್ಕೂ ಮುನ್ನ ಮನೆಯಲ್ಲಿ ಪಾಲಕರು ಸಹ ಮಕ್ಕಳ ಮುಂದೆ ಸುಳ್ಳು ಹೇಳಬಾರದು ಎಂದು ಕಿವಿಮಾತು ಹೇಳಿದರು.

ಕಾವೇರಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಪ್ರೊ.ನಾಗೇಂದ್ರ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ. ಆಗಾಗ್ಗೆ ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಅಧ್ಯಯನದ ಬಗ್ಗೆ ಉಪನ್ಯಾಸಕರಿಂದ ಮಾಹಿತಿ ಪಡೆಯಬೇಕು. ಲಕ್ಷಾಂತರ ರೂ. ಖರ್ಚು ಮಾಡಿ ಕಾಲೇಜಿನಲ್ಲಿ ಪ್ಲೇಸ್‌ಮೆಂಟ್ ತರಬೇತಿ ಪ್ರಾರಂಭಿಸಲಾಗಿದೆ. ಆದರೆ ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಈ ಬಗ್ಗೆ ಪಾಲಕರು ಗಮನ ಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಆಗಬೇಕಾದರೆ ಜ್ಞಾನ, ಕೌಶಲ, ಆಂಗ್ಲಭಾಷಾ ಪ್ರಭುತ್ವ ಬೆಳೆಸಿಕೊಳ್ಳಬೇಕು. ಇವುಗಳಲ್ಲಿ ಯಾರು ಪರಿಣಿತರಿರುತ್ತಾರೋ ಅವರು ಕ್ಯಾಂಪಸ್ ಸೆಲೆಕ್ಷನ್ ಆಗಲು ಕಷ್ಟಪಡಬೇಕಿಲ್ಲ. ಗ್ರಾಮೀಣ ಮಕ್ಕಳಲ್ಲಿ ಕೀಳಿರಿಮೆ ಇರುತ್ತದೆ. ಅದನ್ನು ಬಿಟ್ಟರೆ ಒಳ್ಳೆಯ ಸಾಧನೆ ಮಾಡಬಹುದು. ಉತ್ತಮ ಪರಿಣತಿ ಪಡೆದ ವಿದ್ಯಾರ್ಥಿಗಳು ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಸಿನಿಮಾ ಮಾಧ್ಯಮದ ಕೀಳು ಅಭಿರುಚಿಗೆ ಮಾರುಹೋಗದೆ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ, ಸರ್ ಎಂ.ವಿಶ್ವೇಶ್ವರಯ್ಯ ಅವರಂತಹ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಬಿಎಸ್‌ಎಸ್‌ಐಎನ್‌ಡಬ್ಲ್ಯು ವ್ಯವಸ್ಥಾಪಕ ಅಂಬುಜಾಕ್ಷನ್ ನಾಯರ್, ಕಾಲೇಜಿನ ಅಧ್ಯಕ್ಷ ಡಾ.ಎಚ್.ಪಿ.ರಾಜು, ಪ್ರಾಂಶುಪಾಲ ಪ್ರೊ.ಶ್ರೀಕಂಠಪ್ಪ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net