ಕೌಶಲಗಳ ನವೀಕರಣದಿಂದ ಸವಾಲು ಸಲೀಸು : ಡಾ.ರವೀಂದ್ರ ವಿಕ್ರಮ್ ಸಿಂಗ್ ಅನಿಸಿಕೆ

sdm
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕೌಶಲಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಮತ್ತು ಅನ್ವಯಿಕ ಸಾಮರ್ಥ್ಯದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರುಗೊಂಡಾಗ ಮಾತ್ರ ಅಚ್ಚಳಿಯದ ಪ್ರಭಾವ ಮೂಡಿಸಿ ಯಶಸ್ಸು ಗಳಿಸಲು ಸಾಧ್ಯ ಎಂದು ಬೆಂಗಳೂರಿನ ಸಿಗ್ಮಾ ಅಲ್ಡ್ರಿಜ್ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ.ರವೀಂದ್ರ ವಿಕ್ರಮ್ ಸಿಂಗ್ ಹೇಳಿದರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಪ್ರಯುಕ್ತ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದ ಕಲಿಕೆಯ ಹಾದಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ ಮತ್ತು ವಿವೇಚನೆಯೊಂದಿಗೆ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ಕ್ರಮಿಸಬೇಕು ಎಂದರು.

ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದರು. ಎಸ್.ಡಿ.ಎಂ.ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಮಗ್ರ ವಿವರಗಳನ್ನೊಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಉಪಪ್ರಾಂಶುಪಾಲ ಎಸ್.ಎನ್.ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ನೆಫಿಸತ್ ಪಿ. ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕಿ ಸ್ವಾತಿ ಬಿ.ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net