

ನಾಗಮಂಗಲ: ಭಾರತ ತನ್ನದೇ ವಿಶಿಷ್ಟ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಸಂಸ್ಕಾರಗಳಿಂದಾಗಿ ಇಂದು ವಿಶ್ವಗುರು ಎನಿಸಿಕೊಂಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ದೇಶದ ಪ್ರಾಚ್ಯಪ್ರಜ್ಞೆ ಅವಶ್ಯಕ ಎಂದು ಇತಿಹಾಸ ತಜ್ಞ ಮಹಮ್ಮದ್ ಕಲೀಂವುಲ್ಲಾ ಕಿವಿಮಾತು ಹೇಳಿದರು.
ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಾಚ್ಯಪ್ರಜ್ಞೆ ಅರಿವು ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಕಸಲಗೆರೆಯ ಐತಿಹಾಸಿಕ ದೇವಾಲಯದ ಕ್ಷೇತ್ರ ಭೇಟಿ ವೇಳೆ ಉಪನ್ಯಾಸ ನೀಡಿದರು.
ನಾಡಿನ ಪರಂಪರೆಯನ್ನು ಅರಿತು ನಡೆಯಬೇಕಿರುವಂತಹ ಮಹತ್ತರವಾದ ಜವಾಬ್ದಾರಿ ನಮ್ಮ ಯುವಪೀಳಿಗೆಯ ಮೇಲಿದೆ. ಇತಿಹಾಸವನ್ನು ತಿಳಿಯದವನು ಎಂದಿಗೂ ಇತಿಹಾಸ ನಿರ್ಮಿಸಲಾರ. ಆದ್ದರಿಂದ ಇತಿಹಾಸವನ್ನು ತಿಳಿದು ತದನಂತರ ಅದನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕಿದೆ. ಮೊದಲಿಗೆ ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದು ಅವುಗಳ ಮಾಹಿತಿಯನ್ನು ಚಿತ್ರಸಹಿತ ಸಂಗ್ರಹಿಸುವ ಹವ್ಯಾಸವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಮೈಗೂಡಿಸಿಕೊಳ್ಳಬೇಕು. ಆನಂತರ ಮಾಹಿತಿ ಆಧರಿಸಿ ಅವುಗಳ ಕುರಿತಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಮೂಲಕ ಸ್ಥಳೀಯವಾಗಿ ಒಬ್ಬ ಸಂಶೋಧಕನಾದಾಗ ಮಾತ್ರ ಇತಿಹಾಸವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಅನೇಕ ಸ್ಮಾರಕಗಳು, ಇತಿಹಾಸವನ್ನು ಸಾರುವಂತಹ ಪಳೆಯುಳಿಕೆಗಳು ಇಂದು ಗ್ರಾಮೀಣ ಪ್ರದೇಶದ ಜನರಿಗೆ ಅರಿವಿಲ್ಲದೆ ಅವನತಿ ಅಂಚಿಗೆ ತಲುಪುತ್ತಿವೆ. ಇಂತಹ ಸ್ಥಳಗಳನ್ನು ವಿದ್ಯಾರ್ಥಿಗಳು ಗುರುತಿಸಿ ಅವುಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಅವುಗಳನ್ನು ಸಂರಕ್ಷಿಸಬೇಕು. ಆಗ ಮಾತ್ರ ಹಿಂದಿನ ಮಹನೀಯರ ಸಾಧನೆ ಹಾಗೂ ನಮ್ಮ ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ. ಇತಿಹಾಸ ಕೇವಲ ಇತಿಹಾಸ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿಯುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ಶಿವಕುಮಾರ್ ಎನ್.ಸಿ.ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ವೀರಗಲ್ಲುಗಳು, ಮಾಸ್ತಿಕಲ್ಲುಗಳು ಹಾಗೂ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಮೂಲಕ ಪ್ರಾಚ್ಯಪ್ರಜ್ಞೆ ಪಡೆಯುವುದಷ್ಟೇ ಅಲ್ಲದೆ ತಮ್ಮ ಗ್ರಾಮಸ್ಥರಲ್ಲೂ ಅರಿವು ಮೂಡಿಸುವ ಮೂಲಕ ಸ್ಮಾರಕಗಳ ಸಂರಕ್ಷಣೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಶಿಕ್ಷಕರಾದ ಎಚ್.ಟಿ.ಗಿರೀಶ್, ನೂರ್ ಅಫ್ರೋಜ್, ಎಚ್.ಎಸ್.ಉಮಾ, ಆರ್.ನಾಗೇಂದ್ರ, ಇಂದ್ರೇಶ್, ಅಂದಾನಿಗೌಡ, ಶ್ಯಾಮಲಾ, ಗೊರಪ್ಪ, ಕಾಂತರಾಜು, ಯೋಗೀಶ್ ಗ್ರಾಮಸ್ಥರು ಇದ್ದರು.