

ಹುಬ್ಬಳ್ಳಿ: ಶಿಕ್ಷಣವು ಮನುಷ್ಯನಲ್ಲಿ ಅಡಗಿರುವ ಶಕ್ತಿಯನ್ನು ಬಡಿದೆಬ್ಬಿಸುತ್ತದೆ. ಅದು ಕೇವಲ ಅಂಕ ಗಳಿಕೆಯ ಮಾರ್ಗವಲ್ಲ ಬದಲಾಗಿ ವ್ಯಕ್ತಿತ್ವದ ಕೈಗನ್ನಡಿ ಎಂದು ಪ್ರೇರಣಾದಾಯಕ ಭಾಷಣಕಾರ ಮಹೇಶ ಮಾಶಾಳ ಹೇಳಿದರು.
ತಾಲೂಕಿನ ಕೊಟಗೊಂಡಹುಣಸಿಯ ಕೆಎಲ್ಇ ಪ್ರೇರಣಾ ವಸತಿಯುತ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿಯ ವಿದ್ಯಾನಗರ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಒರಿಯಂಟೇಶನ್ ಪ್ರೋಗ್ರಾಂನಲ್ಲಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದೇ ಶಿಕ್ಷಣ, ಅಂತರಂಗದ ಅರಿವಿನ ಪರಿಶುದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದರಿಂದ ಏನಾದರೂ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಆಡಳಿತ ಮಂಡಳಿ ನಿರ್ದೇಶಕ ಮಹಾಂತೇಶ ಕವಟಗಿಮಠ, ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯ. ಪ್ರತಿ ವಿದ್ಯಾರ್ಥಿ ತನ್ನಲ್ಲಿನ ಅಂತಃಶಕ್ತಿಯನ್ನು ಪ್ರೇರೆಪಿಸಿ ಕಾರ್ಯಪ್ರವೃತ್ತರಾಗಬೇಕು. ಸಾಧನೆಗೆ ಯಾವುದೇ ಜಾತಿ, ಧರ್ಮ, ಬಡತನದ ಅಡ್ಡಿ ಇರುವುದಿಲ್ಲ ಎಂದರು.
ಆವಂತಿ ಕೋಆರ್ಡಿನೇಟರ್ ಪ್ರದೀಪ ಶೆಟ್ಟಿ, ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳೊಂದಿಗೆ ಅಧ್ಯಯನದಲ್ಲಿ ನಿರತರಾಗಬೇಕೆಂದರು. ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿದರು.
2025ನೇ ಸಾಲಿನ ನೀಟ್, ಜೆಇಇ, ಕೆಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಪ್ರಾಚಾರ್ಯ ಶ್ರೀನಿವಾಸ ಲಿಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಕಿತ್ತೂರ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಇಳಿಗೇರ ಪರಿಚಯಿಸಿದರು. ರೇಖಾ ಹತ್ತಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಮಹಾಂತಮ್ಮ ಹಿರೇಮಠ ವಂದಿಸಿದರು.