

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯು ತನ್ನ ವಿಶಿಷ್ಟವಾದ ಜಾನಪದ ಕಲೆ, ಸಾಹಿತ್ಯ, ಸಂಗೀತ ಮತ್ತು ನೃತ್ಯ ಪ್ರಕಾರಗಳಿಂದ ಸಮೃದ್ಧವಾಗಿದೆ. ಈ ಭಾಗದಲ್ಲಿ ಪ್ರತಿಯೊಂದು ಸಮುದಾಯವು ತನ್ನದೇ ಆದ ವಿಶಿಷ್ಟವಾದ ಜಾನಪದ ಸಂಸ್ಕೃತಿ ಹೊಂದಿರುವುದರಿಂದ ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.
ಕಾರವಾರ ನಗರದ ದಿವೇಕರ ಪದವಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಕನ್ನಡ ಜಾನಪದ ಪರಿಷತ್ ಉ.ಕ.ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದಕ್ಕೆ ಇತಿಮಿತಿ ಹಾಗೂ ಚೌಕಟ್ಟಿಲ್ಲ,ಇದು ಅವಿನಾಶಿ. ಗ್ರಾಮೀಣ ಭಾಗದ ಮೂಲ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಜಾನಪದ ಪರಿಷತ್ ಸ್ಥಾಪನೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಏರ್ಪಡಿಸಲಾಗುವುದು ಹಾಗೂ ಮೂಲ ಕಲಾವಿದರ ಸಮೀಕ್ಷೆಯನ್ನೂ ಕೈಗೊಳ್ಳಲಾಗುವುದು ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಪ್ರಕಾಶ ಬಿ. ನಾಯಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಮೂಲ ಜನಪದ ಕಲಾವಿದರ ಕೈಪಿಡಿಯನ್ನು ತರಲಾಗುವುದು. ದಾಖಲೀಕರಣ ಹಾಗೂ ತರಬೇತಿಯನ್ನು ಜಿಲ್ಲಾದ್ಯಂತ ಏರ್ಪಡಿಸುವ ಮೂಲಕ ಯುವಜನರಲ್ಲಿ ಜಾನಪದ ಜಾಗೃತಿ ಮೂಡಿಸಲಾಗುವುದು ಎಂದರು.
ಕೆನರಾ ವೆಲ್‌ಫೆರ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಪಿ. ಕಾಮತ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದದಲ್ಲಿ ಸಂಸ್ಕಾರವಿದೆ, ಮನುಷ್ಯರ ಭಾವನೆಗಳನ್ನು ಹೊಂದಾಣಿಕೆ ಮಾಡುವ ಗುಣವಿದೆ. ಇದನ್ನು ಉಳಿಸಿ ಬೆಳೆಸುವುದು ಇಂದಿನ ಎಲ್ಲ ಯುವಜನರ ಕರ್ತವ್ಯ ಎಂದರು. ಹಿರಿಯ ವಕೀಲ ನಾಗರಾಜ ನಾಯಕ ಬಾಸಗೋಡ, ಸೇಂಟ್ ಮಿಲಾಗ್ರಿಸ್ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.
ಎಸ್. ಬಾಲಾಜಿ ಅವರು ಅಂಕೋಲಾದ ಬೆಳಂಬಾರದ ನಾಟಿ ವೈದ್ಯ ಹನುಮಂತ ಬಿ. ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು. ದಿವೇಕರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕೇಶವ ಭಟ್ ಸ್ವಾಗತಿಸಿದರು. ಕ.ಜಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮರಾಠ ನಿರ್ವಹಿಸಿದರು.
ಕಾರ್ಯಕ್ರಮದ ಬಳಿಕ ಕುಮಟಾ ತಾಲೂಕಿನ ಗುಮಟೆ ಪಾಂಗ್ ತಂಡ, ಕೆಪಿಎಸ್ ಶಿರವಾಡದ ಪ್ರಾಥಮಿಕ ಶಾಲಾ ಮಕ್ಕಳಿಂದ ಹಾಗೂ ದಿವಾಕರ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.