

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಎಂಟು ದಿನಗಳ ಕಾಲ ಸತತ ಯಾಗ, ಯಜ್ಞ ಮಾಡುವುದು ಎಲ್ಲರ ಕೈಯಿಂದ ಸಾಧ್ಯವಿಲ್ಲ. ಅದು ದೇವರ ಪ್ರೇರಣೆ, ಅನುಗ್ರಹ ಇದ್ದರೆ ಮಾತ್ರ ಸಾಧ್ಯ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ದೈವನರ್ತಕ ದೇವಯ್ಯ ಖಾರ್ವಿ ಗಂಗೊಳ್ಳಿ ಅವರ 51ನೇ ಪುಣ್ಯ ಸಂಸ್ಮರಣಾರ್ಥ ಹಾಗೂ ಲೋಕಕಲ್ಯಾಣಾರ್ಥ ಶ್ರೀ ಚಕ್ರೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಬುಧವಾರ ನಡೆದ ಋಗ್-ಯಜು ಸಂಹಿತಾ ಯಾಗ, ಶ್ರೀ ಬಾಲಾ ತ್ರಿಪುರಸುಂದರಿ ಲಕ್ಷ ಸ್ವಾಹಾಕಾರ ಯಾಗ, ಶ್ರೀ ಲಲಿತೋಪಾಖ್ಯಾನಂ ಪಾರಾಯಣ ಸಪ್ತಾಹ ಕಾರ್ಯಕ್ರಮದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಉತ್ತರಾಖಂಡದ ಶ್ರೀ ಕೇದಾರನಾಥ ಜ್ಯೋತಿರ್ಲಿಂಗ ದೇವಾಲಯದ ಪ್ರಧಾನ ಅರ್ಚಕ ವಾಗೀಶ್ ಲಿಂಗ ಶಿವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ, ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಗೌರವಾಧ್ಯಕ್ಷ ಜಿ.ರಾಮದಾಸ ಖಾರ್ವಿ, ಅಧ್ಯಕ್ಷ ನಾಗೇಶ ಖಾರ್ವಿ, ಮಲ್ಲಿಕಾರ್ಜುನ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ವಿನಾಯಕ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಪ್ರಸ್ತಾವನೆಗೈದರು. ಎನ್.ನಾಗರಾಜ ಖಾರ್ವಿ par ಸಹಕರಿಸಿದರು.
ಕಾರ್ಯಕ್ರಮದಲ್ಲಿ ಹತ್ತು ದೈವನರ್ತಕರಿಗೆ ನರ್ತಕ ರತ್ನ ಪ್ರಶಸ್ತಿ ಮತ್ತು ಎಂಟು ಮಂದಿಗೆ ಶ್ರೀ ಚಕ್ರೇಶ್ವರಿ ಸೇವಾರತ್ನ ಪ್ರಶಸ್ತಿ ಪ್ರದಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಹಾಗೂ ಪ್ರಮುಖರಾದ ಎಸ್.ರವಿ ಕುಮಾರ್ par ಶುಭಾಶಂಸನೆಗೈದರು.