

ತಿ.ನರಸೀಪುರ: ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲು ಸೋಸಲೆ ನವೋದಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು ಎಂದು ಕ್ಲಬ್‌ನ ನೂತನ ಅಧ್ಯಕ್ಷ ಎಂ.ಪರಶಿವಮೂರ್ತಿ ಹೇಳಿದರು.
ಪಟ್ಟಣದ ಲೋಕೋಪಯೋಗಿ ಅತಿಗೃಹದಲ್ಲಿ ಭಾನುವಾರ ನಡೆದ ಸೋಸಲೆ ನವೋದಯ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮಾತನಾಡಿದ ಅವರು, ಶಿಕ್ಷಕ ಸಮುದಾಯ ಹಾಗೂ ಕ್ರೀಡಾಪಟುಗಳು ಸ್ಥಾಪಿಸಿರುವ ಸ್ಪೋರ್ಟ್ಸ್ ಕ್ಲಬ್‌ಅನ್ನು ನಿರಂತರವಾಗಿ ಕ್ರಿಯಾಶೀಲತೆಯಿಂದ ಇರುವಂತಾಗಲು ಆಗಾಗ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಹಲವು ದಶಕಗಳಿಂದಲೂ ನವೋದಯ ಸ್ಪೋರ್ಟ್ಸ್ ಕ್ಲಬ್‌ನಿಂದ ರಾಜ್ಯಮಟ್ಟದ ವಾರ್ಷಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಹೋಬಳಿ ಕೇಂದ್ರವೊಂದರಲ್ಲಿ ಕ್ರೀಡಾಂಗಣವನ್ನು ಕಲ್ಪಿಸಿಕೊಡಲು ನಿವೇಶನ ಮತ್ತು ಅನುದಾನವನ್ನು ಮಂಜೂರು ಮಾಡುವುದಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪೋರ್ಟ್ ಕ್ಲಬ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಎಂ. ಪರಶಿವಮೂರ್ತಿ ಹೇಳಿದರು.
ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷ ಎಂ.ಪುಟ್ಟಸ್ವಾಮಿ, ಕಾರ್ಯದರ್ಶಿ ಪಿ.ಚಂದ್ರಶೇಖರ್, ಖಜಾಂಚಿ ಎಸ್.ವಿ.ತಿರುಮಲ್ಲೇಶ್, ಸಹಕಾರ್ಯದರ್ಶಿ ಎಸ್.ನಾಗೇಶ್, ಸದಸ್ಯ ನಾಗರಾಜು, ಸುರಾಜ್ ಪೃಥ್ವಿ, ಪಂಕಜಾ, ಹರೀಶ್, ಮುಖಂಡ ಎನ್.ನಿಂಗಯ್ಯ ಇತರರು ಇದ್ದರು.