ಸಂಘಟಕರಿಗೆ ಟಿಕೆಟ್ ನೀಡಲು ಒತ್ತಾಯ

New bjp meeting new
Published on

ಹುಬ್ಬಳ್ಳಿ : ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರತಿಪಕ್ಷ ಆರ್. ಅಶೋಕ ನೇತೃತ್ವದ ಬಿಜೆಪಿ ಪ್ರಮುಖರ ತಂಡ ನಗರದಲ್ಲಿ ಗುರುವಾರ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಿತು.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖರು ಭಾಗವಹಿಸಿ, ಪಕ್ಷದ ಸಂಘಟನೆಗೆ ಆದ್ಯತೆ ಕೊಡುವವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ಸತತ ಎರಡು ಬಾರಿ ಚುನಾಯಿತರಾದ ಎಸ್.ವಿ. ಸಂಕನೂರ ಅವರು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿಲ್ಲವೆಂದು ಮಾಜಿ ಸಚಿವ ಕಳಕಪ್ಪ ಬಂಡಿ ಸೇರಿದಂತೆ ವಿವಿಧ ಮುಖಂಡರು ಆರೋಪಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಪದವೀಧರ ಮತದಾರರ ಸಂಖ್ಯೆ ಕಡಿಮೆ ಇತ್ತು. ಇದೀಗ, ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ವ್ಯಕ್ತಿಯ ಆಧಾರದ ಮೇಲೆ ಟಿಕೇಟ್ ಕೊಡಬೇಡಿ. ಪಕ್ಷ ಸಂಘಟಿಸುವವರು, ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡವರಿಗೆ ಟಿಕೇಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತು ಎನ್ನಲಾಗಿದೆ.

ಸಭೆಯಲ್ಲಿ ಧಾರವಾಡ ಜಿಲ್ಲೆಯಿಂದ 14 ಜನ ಆಕಾಂಕ್ಷಿಗಳು, ಗದಗನಿಂದ ಒಬ್ಬರು ಹಾಗೂ ಹಾವೇರಿಯಿಂದ ಇಬ್ಬರು ಆಕಾಂಕ್ಷಿಗಳು ಚುನಾವಣೆ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದರು. ಉತ್ತರ ಕನ್ನಡ ಜಿಲ್ಲೆಯಿಂದ ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ.

ಕಳೆದ ಬಾರಿಯ ಮತದಾರರ ಸಂಖ್ಯೆ, ಈ ಬಾರಿಯ ಮತದಾರರ ಸಂಖ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರತಿಪಕ್ಷಗಳು ಯಾರನ್ನು ಕಣಕ್ಕೆ ಇಳಿಸಬಹುದೆಂಬ ಬಗ್ಗೆಯೂ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.

ಪ್ರಮುಖರಾದ ಬಿ. ಶ್ರೀರಾಮುಲು, ಸಿ.ಟಿ. ರವಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಸಿ. ಪಾಟೀಲ, ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ, ನಾಲ್ಕೂ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು ಹಾಗೂ ಕೋರ್ ಕಮೀಟಿ ಸದಸ್ಯರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net