

ಮಂಡ್ಯ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಉತ್ತರ ವಲಯ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಖುಷಿಯ ವಿಷಯ ಎಂದು ಬಿಇಒ ಕೆ.ಟಿ.ಸೌಭಾಗ್ಯ ಹೇಳಿದರು.
ತಾಲೂಕಿನ ಹೊಳಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹತ್ತನೇ ತರಗತಿ ಪರೀಕ್ಷೆ-2 ಸಂಬಂಧ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರೀಕ್ಷೆ-1ರ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮದೇ ಆದ ಕಲಿಕಾ ಪೂರಕ ಕಾರ್ಯಕ್ರಮಗಳನ್ನು ಅಳವಡಿಸುವ ಮೂಲಕ ತೇರ್ಗಡೆಯಾಗಲು ಪ್ರೇರೇಪಿಸಬೇಕು ಎಂದರು.
ವಿದ್ಯಾರ್ಥಿಗಳ ಹಿನ್ನೆಲೆ ಅರಿತು ಪಾಲಕರ ಜತೆ ಸಂಪರ್ಕಿಸುವ ಮೂಲಕ ಮಕ್ಕಳ ಕಲಿಕೆ ಗಟ್ಟಿಯಾಗಿ ಪರೀಕ್ಷೆಗೆ ಅಣಿಗೊಳಿಸಬೇಕಾದ ಮಹತ್ತರ ಸವಾಲನ್ನು ಎದುರಿಸಲು ಶಿಕ್ಷಕರು ಸಿದ್ಧರಾಗಬೇಕು. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪುನರಾವರ್ತನೆಯನ್ನು ನಿತ್ಯ ಆಯೋಜಿಸಿ ಕಲಿಕೆಯನ್ನು ವೃದ್ಧಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ಸತೀಶ್ ಹಾಗೂ ಜಿ.ಸಿ.ರಜನಿ ಅವರು ಪಾಸಿಂಗ್ ಪ್ಯಾಕೇಜ್ ಹಾಗೂ ಶಾಲೆಯಲ್ಲಿ ಗ್ರೇಡ್ ಕಡಿಮೆ ಇರುವ ಮಕ್ಕಳ ಕಲಿಕೆ ಗಟ್ಟಿಗೊಳಿಸುವ ಕುರಿತು ಉಪನ್ಯಾಸ ನೀಡಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಆರ್.ಶಶಿಧರ ಈಚಗೆರೆ, ಪ್ರಭಾರಿ ಮುಖ್ಯ ಶಿಕ್ಷಕ ಪುಟ್ಟಸ್ವಾಮಯ್ಯ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಚ್.ಚಂದ್ರಶೇಖರ್, ಶಿಕ್ಷಕರಾದ ಮೋಹನ್‌ಕುಮಾರ್, ಸಂಗಪ್ಪರಾಜನಾಳ್, ಎ.ಆರ್.ಶ್ರೀನಿವಾಸ್, ಎಂ.ಆರ್.ಸುನೀತಾ ಇತರರಿದ್ದರು.