ಮಾಜಿ ಪ್ರಧಾನಿ ಅಟಲ್‌ಜೀ ಜನ್ಮಶತಾಬ್ದಿ ಪ್ರಯುಕ್ತ ಆಯೋಜನೆ

Published on

ಮೈಸೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಅಂಗವಾಗಿ ಫೆ.15ರಿಂದ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಟಲ್ ಜೀ ಜನ್ಮ ಶತಾಬ್ದಿ ಸಮಿತಿಯ ರಾಜ್ಯ ಸಹ ಸಂಚಾಲಕ ಫಣೀಶ್ ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಶ್ರೇಷ್ಠ ರಾಜಕಾರಣಿಯಾಗಿದ್ದು, ವಿರೋಧ ಪಕ್ಷದವರು ಕೂಡ ಅಟಲ್ ಜೀ ಬಗ್ಗೆ ಅಭಿಮಾನ ಹೊಂದಿದ್ದ ಅಜಾತ ಶತ್ರುವಾಗಿದ್ದರು. ರಾಜಕಾರಣಿಗಳಿಗೆ ಆದರ್ಶರಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದ ಅಂತಹ ಮೇಧಾವಿ ರಾಜಕಾರಣಿ ಜನಿಸಿ ನೂರು ವರ್ಷವಾದ ಹಿನ್ನೆಲೆಯಲ್ಲಿ ವರ್ಷ ಪೂರ್ತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ 12 ಜನರ ತಂಡದ ಸಮಿತಿ ರಚಿಸಲಾಗಿದೆ. ಅಟಲ್ ಜೀ ಅವರ ಮೂರು ಮುಖಗಳಾದ ಸಂಘಟನಾತ್ಮಕ, ಹೋರಾಟ ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಅಟಲ್ ಜೀ ಮೈಸೂರು ಜಿಲ್ಲೆಯಲ್ಲಿ ಎಲ್ಲಿ ಉಳಿದುಕೊಂಡಿದ್ದರು, ಯಾರ ಸಂಪರ್ಕದಲ್ಲಿ ಇದ್ದರು ಎಂದು ಅಧ್ಯಯನ ಮಾಡಲಾಗುತ್ತದೆ. ಫೆ.15ರಿಂದ ಮಾ.15ರವರೆಗೆ ಅಟಲ್ ಜೀ ಬಗ್ಗೆ ಸಮಾವೇಶ ಆಯೋಜನೆ ಮಾಡಲಾಗುವುದು. ವಸ್ತುಗಳು, ಲೇಖನ ರೂಪದಲ್ಲಿ ಅಟಲ್ ಅವರ ಜೀವನ ಕಟ್ಟಿಕೊಡಲಾಗುವುದು. ಸಮಾವೇಶದಲ್ಲಿ ಅಟಲ್ ಜೀ ಬಗ್ಗೆ ವ್ಯಕ್ತವಾಗುವ ಅನುಭವಗಳನ್ನೂ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಲಹದಿಂದ ಸಹಜವಾಗಿಯೇ ಪಕ್ಷಕ್ಕೆ ಮುಜುಗರವಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಹಿರಿಯ ನಾಯಕರು ಗಮನಿಸುತ್ತಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ಅಪಪ್ರಚಾರ: ಬಿಜೆಪಿ ನಗರದ ವಕ್ತಾರ ಮೋಹನ್ ಮಾತನಾಡಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ಹಾಗೂ ನಾಯಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜ್ಯ ವಕ್ತಾರರಾಗಿರುವ ಲಕ್ಷ್ಮಣ್ ಕೇವಲ ಮೈಸೂರಿಗೆ ಸೀಮಿತವಾಗಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದರು.

ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗ ಪೂರ್ಣಗೊಳ್ಳಲು ಪ್ರತಾಪಸಿಂಹ ಬರಬೇಕಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಕೇಂದ್ರ ಬಜೆಟ್ ಜನಪರವಾಗಿದೆ. ಇದನ್ನು ಸಹಿಸಲಾಗದ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಆ ಪಕ್ಷದ ಸಂಸದರು ಏನು ಮಾಡಿದ್ದರು?. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಜಿಲ್ಲೆಗೆ ಏನು ಮಾಡಿದ್ದಾರೆ ಹೇಳಲಿ. ಕಾಂಗ್ರೆಸ್‌ನವರು 60 ವರ್ಷದಲ್ಲಿ ಮಾಡಲಾಗದ್ದನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿ ಆಗಿದೆ. ಎಲ್ಲ ಜನರಿಗೂ ಒಂದಲ್ಲ ಒಂದು ಯೋಜನೆ ದೊರೆಯುವಂತಾಗಿದೆ. ಹೀಗಾಗಿ ಭಾರತ ವಿಶ್ವಗುರುವಾಗುವತ್ತ ಮುನ್ನಡೆದಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಸುರೇಶ್‌ಬಾಬು, ಶಿವಕುಮಾರ್, ಜಿಲ್ಲಾ ಸಂಚಾಲಕ ಕಿರಣ್ ಜೈರಾಮೇಗೌಡ, ರಮೇಶ್, ಜಿಲ್ಲಾ ಸಮಿತಿಯ ಪ್ರಮುಖರಾದ ದಯಾನಂದ ಪಟೇಲ್, ಮಹೇಶ್ ರಾಜೇ ಅರಸ್, ಪಾಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net