ಹೆಣ್ಣು ಭ್ರೂಣ ಹತ್ಯೆ ಹಿಂದೆ ವ್ಯವಸ್ಥಿತ ದಂಧೆ!

ಹೆಣ್ಣು ಭ್ರೂಣ ಹತ್ಯೆ ಹಿಂದೆ ವ್ಯವಸ್ಥಿತ ದಂಧೆ!
ಆಸ್ಪತ್ರೆಗೆ ಬೀಗ
Published on

ಹೊಸಕೋಟೆಯ ಎಸ್‌ಪಿಜಿ ಆಸ್ಪತ್ರೆಯಲ್ಲಿ ಅಕ್ರಮ ಸ್ಕಾೃನಿಂಗ್ ಯಂತ್ರ ಪತ್ತೆ

ಕಸದ ಬುಟ್ಟಿಯಲ್ಲಿತ್ತು ಭ್ರೂಣ


ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಿರುಮಲಶೆಟ್ಟಿ ಹಳ್ಳಿಯ ಎಸ್‌ಪಿಜಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಹಿಂದೆ ವ್ಯವಸ್ಥಿತ ದಂಧೆ ನಡೆಯುತ್ತಿದೆ ಎಂದು ಶಂಕಿಸಿರುವ ಪೊಲೀಸರಿಗೆ ಆಸ್ಪತ್ರೆಯಲ್ಲಿ ಅಕ್ರಮವಾಗಿ ಸ್ಕಾೃನಿಂಗ್ ಯಂತ್ರ ಪತ್ತೆಯಾಗಿರುವುದು ಅನುಮಾನವನ್ನು ಪುಷ್ಟೀಕರಿಸಿದೆ.
ಪ್ರಕರಣ ಬೆನ್ನತ್ತಿರುವ ಪೊಲೀಸರು ಗುರುವಾರ ಆಸ್ಪತ್ರೆಯ ತಪಾಸಣೆ ವೇಳೆ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದೆ, ಆ ಯಂತ್ರದಲ್ಲಿ ಸ್ಕ್ಯಾನಿಂಗ್ ಮಾಡಿದ ಬಗ್ಗೆ ಯಾವ ದಾಖಲೆ ಪುಸ್ತಕದಲ್ಲೂ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಜತೆಗೆ .ಆಸ್ಪತ್ರೆಯಲ್ಲಿ 1 ಸ್ಕ್ಯಾನಿಗ್ ಯಂತ್ರಕ್ಕೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಮತ್ತೊಂದಕ್ಕೆ ಅನುಮತಿ ಪಡೆದಿಲ್ಲ ಈ ಹಿನ್ನೆಲೆಯಲ್ಲಿ ಈ ಯಂತ್ರವನ್ನು ಅಕ್ರಮಕ್ಕಾಗಿಯೇ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ಆಸ್ಪತ್ರೆಗೆ ಬೀಗ: ಪ್ರಾಥಮಿಕ ತನಿಖೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಎಂಬುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೀಗ ಜಡಿಯಲಾಗಿದೆ. ಒಳರೋಗಿಗಳನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಇನ್ನಿತರ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಏತನ್ಮಧ್ಯೆ ಆಸ್ಪತ್ರೆ ಮುಖ್ಯಸ್ಥ ಡಾ.ಶ್ರೀನಿವಾಸ್ ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕಸದ ಬುಟ್ಟಿಯಲ್ಲಿ ಭ್ರೂಣ: ಜಿಲ್ಲೆಯಾದ್ಯಂತ ವಿವಿಧ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಎಸ್ ಪಿಜಿ ಆಸ್ಪತ್ರೆಯಲ್ಲಿಯೂ ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಕ್ಯಾನಿಂಗ್ ವಿಭಾಗದ ಕಸದ ಬುಟ್ಟಿಯಲ್ಲಿ 16 ವಾರದ ಹೆಣ್ಣು ಭ್ರೂಣ ಪತ್ತೆಯಾಗಿತ್ತು. ಆ ಭ್ರೂಣದ ಬಗ್ಗೆ ಯಾವುದೇ ಪುಸ್ತಕದಲ್ಲಿ ದಾಖಲೆ ಇಲ್ಲದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಕರ ಪತ್ತೆಗೆ ಹುಡುಕಾಟ ಆಸ್ಪತ್ರೆಯಲ್ಲಿ ದೊರೆತ ಹೆಣ್ಣು ಭ್ರೂಣದ ಪಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಗಿದೆ. ನನಗೆ 9 ತಿಂಗಳ ಮಗುವಿದ್ದು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದೆ. ಆದರೆ ಮತ್ತೆ ನಾನು ಗರ್ಭ ಧರಿಸಿರುವುದು ಖಾತರಿಯಾಗಿತ್ತು ಎಂದು ಅತ್ತ ಕಡೆಯಿಂದ ಮಾತನಾಡಿದ ಮಹಿಳೆಯೊಬ್ಬರು ಕರೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಸ್ವಿಚ್‌ಆ್ ಮಾಡಿಕೊಂಡಿದ್ದಾರೆ. ಪಾಲಕರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ತಂಡ ರಚನೆ:ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಭ್ರೂಣ ಹತ್ಯೆ ಪ್ರಕರಣ ಬಯಲಿಗೆ ಬಂದ ಹಿನ್ನೆಲೆಯಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾವಹಿಸಿ ತಪಾಸನೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಇದಕ್ಕಾಗಿಯೇ ಪ್ರತ್ಯೇಕ ತಂಡ ರಚಿಸಲಾಗಿತ್ತು. ಎಲ್ಲ ಕಡೆ ತಪಾಸಣೆ ನಡೆಸಲು ಆರಂಭಿಸಿದ ತಂಡ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಎಸ್‌ಪಿಜಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುವ ವೇಳೆ ಸ್ಕಾೃನಿಂಗ್ ವಿಭಾಗದ ಕಸ ಬುಟ್ಟಿಯೊಂದರಲ್ಲಿ ಭ್ರೂಣ ಪತ್ತೆಯಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಎಂಬುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆಸ್ಪತ್ರೆ ಮುಖ್ಯಸ್ಥ ಡಾ.ಶ್ರೀನಿವಾಸ್ ನಾಪತ್ತೆಯಾಗಿದ್ದಾರೆ. ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಪೊಲೀಸ್ ವಿಚಾರಣೆಗೊಳಪಡಿಸಲಾಗಿದೆ ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net