

ಹನೂರು : ಸರ್ಕಾರದಿಂದ ಸಿಗುವ ಸವಲತುಗಳನ್ನು ಸಮರ್ಪಕವಾಗಿ ಪಡೆಯಲು ಹಾಗೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.
ತಾಲೂಕಿನ ಗಡಿಗ್ರಾಮ ಗೋಪಿನಾಥಂನಲ್ಲಿ ಬುಧವಾರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಜತೆಗೆ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಕೃಷಿಯಲ್ಲಿ ಹಿನ್ನಡೆ ಸಾಧಿಸುವಂತಾಗಿದೆ. ಇತ್ತ ಕಾಡುಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದ್ದು, ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ರೈತರು ತುಂಬ ತೊಂದರೆ ಪಡುವಂತಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಜತೆಗೆ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಈ ದೆಸೆಯಲ್ಲಿ ಗ್ರಾಮ ಘಟಕಗಳನ್ನು ಉದ್ಘಾಟಿಸಿರುವುದು ಅನುಕೂಲವಾಗಲಿದೆ ಎಂದು ತಿಳಿಸಿದರು.
ತಾಲೂಕು ಸಂಘದ ಅಧ್ಯಕ್ಷ ಅಮ್ಜದ್‌ಖಾನ್ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಜನಪ್ರತಿನಿಧಿಗಳು ರೂಪಿಸುತ್ತಿಲ್ಲ. ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಕೃಷಿಯಲ್ಲಿ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಒಗ್ಗಟ್ಟಿನಿಂದ ಹಕ್ಕನ್ನು ಪಡೆದುಕೊಳ್ಳಬೇಕಿದೆ ಎಂದರು.
ಚಿಕ್ಕಲಾತ್ತೂರು ಗ್ರಾಮದಲ್ಲೂ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಗೌಡೇಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ದೇಮಳ್ಳಿ ಪ್ರಸಾದ್, ತಾಲೂಕು ಗೌರವಾಧ್ಯಕ್ಷ ರಾಜಣ್ಣ, ಪದಾಧಿಕಾರಿಗಳಾದ ಕೂಡಲೂರು ವೆಂಕಟೇಶ್, ವೇಲುಸ್ವಾಮಿ, ಚಿಕ್ಕಸ್ವಾಮಿ ಹಾಗೂ ಇನ್ನಿತರರು ಇದ್ದರು.