

ಕಳಸ: ಕಸಾಪದಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಹಳೆಗನ್ನಡ ಕವಿಗಳಾದ ಪಂಪ, ರನ್ನ, ಪೊನ್ನ ಮತ್ತು ನಡುಗನ್ನಡದ ಕವಿಗಳಾದ ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ಹೊಸಗನ್ನಡದ ಮುದ್ದಣ, ಕುವೆಂಪು ಮೊದಲಾದ ಕವಿ, ಲೇಖಕರ ಕೃತಿಗಳ ಕುರಿತ ಉಪನ್ಯಾಸಗಳನ್ನು ಏರ್ಪಡಿಸಬೇಕು ಎಂದು ಕಸಾಪ ಜಿಲ್ಲಾ ಸಂಚಾಲಕ ಎಚ್.ಆರ್.ಪಾಂಡುರಂಗ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದಿಂದ ಕಸಾಪ ಸದಸ್ಯೆ ಫಾತಿಮಾ ರೆಹಮಾನ್ ಅವರ ಮನೆಯಂಗಳದಲ್ಲಿ ಆಯೋಜಿಸಿದ್ದ ಶ್ರಾವಣ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ಸಾಹಿತ್ಯವನ್ನು ಕಸಾಪ ಸದಸ್ಯರು ತಿಳಿದುಕೊಂಡಿರಬೇಕು ಎಂದರು.
ಕಸಾಪ ಕಳಸ ತಾಲೂಕು ಅಧ್ಯಕ್ಷ ಅ.ರಾ.ಸತೀಶ್‌ಚಂದ್ರ ಮಾತನಾಡಿ, ಬಾಳೆಹೊಳೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದ್ದು ಎಲ್ಲ ಸದಸ್ಯರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಫಾತಿಮಾ ರೆಹಮಾನ್ ಮಾತನಾಡಿ, ಕನ್ನಡ ಭಾಷೆಗೆ ಜಾತಿ, ಧರ್ಮದ ಹಂಗಿಲ್ಲ. ನಾವೆಲ್ಲರೂ ಕನ್ನಡಿಗರು. ಎಲ್ಲರೂ ಒಂದಾಗಿ ಭಾಷೆ ಏಳಿಗೆಗೆ ದುಡಿಯೋಣ ಎಂದರು.
ಮಹಿಳಾ ಸದಸ್ಯರಿಗೆ ರಸಪ್ರಶ್ನೆ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಹೋಬಳಿ ಘಟಕದ ಅಧ್ಯಕ್ಷ ಶೇಖರ್ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ಸುಮನಾ ಜಯರಾಜ್, ಖಜಾಂಚಿ ಸುಜಯಾ ಸದಾನಂದ, ಗೀತಾ ಮಕ್ಕಿಮನೆ, ಜಯಶ್ರೀ ಧರಣೇಂದ್ರ, ನಿಖಿತಾ ಸಂತೋಷ್, ಆಶಾ ರಾಘವೇಂದ್ರ ಇದ್ದರು.