

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಬಿ.ಆರ್. ಅಂಬೇಡ್ಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ ಅಭಿಮಾನಿಗಳ ಒಕ್ಕೂಟದಿಂದ ಜ. 9ರಂದು ನೀಡಿರುವ ಬಂದ್ ಕರೆಗೆ ನಗರದ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ.
ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಬಂದ್ಗೆ ಬೆಂಬಲಿಸುವಂತೆ ಸಂಘಟನೆ ವತಿಯಿಂದ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರಿಗೆ ಮನವಿ ಮಾಡಿರುವುದರ ಜತೆಗೆ ನಗರದ ಜನರಲ್ಲಿ ಜಾಗೃತಿ ಸಹ ಮೂಡಿಸಲಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನಾಕಾರರು ಶಾಂತಿಯುತ ಹೋರಾಟ ನಡೆಸಲಿದ್ದಾರೆ. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ರಾಷ್ಟ್ರಪತಿಗೆ ಮನವಿಪತ್ರ ರವಾನಿಸಲಿದ್ದಾರೆ. ಈ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ), ಕಾರ್ಮಿಕ ಸಂಘಟನೆಗಳು ಸೇರಿ ಇತರ ಸಂಘಟನೆಗಳು ಬೆಂಬಲಿಸಿವೆ. ಈಗಾಗಲೇ ಹೋಟೆಲ್ ಸಂಘದವರು ಸಹ ಹೋಟೆಲ್, ಪಾನ್ಶಾಪ್ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಉಳಿದಂತೆ ಆಸ್ಪತ್ರೆ, ಔಷಧ ಅಂಗಡಿಗಳು ಸೇರಿ ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸಾರಿಗೆ ಬಸ್ಗಳ ಸಂಚಾರ ಕುರಿತು ಸಂಸ್ಥೆ ಇನ್ನೂ ಸ್ಪಷ್ಟ ಆದೇಶ ಹೊರಡಿಸಿಲ್ಲ. ಬಹುತೇಕ ಆಟೋಗಳು ಕಾರ್ಯಾಚರಣೆ ನಡೆಸದಿರಲು ತೀರ್ಮಾನಿಸಿವೆ. ಹೀಗಾಗಿ ಪ್ರತಿಭಟನೆ ಸಮಯದಲ್ಲಿ ಜನರ ಓಡಾಟಕ್ಕೆ ತೊಂದರೆಯಾಗಲಿದೆ.