ಭವಿಷ್ಯ ನಿಧಿ ಕನಿಷ್ಠ ಪಿಂಚಣಿ ಜಾರಿಗೆ ಸಂಘಟನೆಗಳ ಒತ್ತಾಯ

17
Published on

ಮೈಸೂರು: ನಿವೃತ್ತ ಕಾರ್ಮಿಕರ ಭವಿಷ್ಯ ನಿಧಿ ಕನಿಷ್ಠ ಪಿಂಚಣಿ ಜಾರಿ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ ಸಂಸದರ ಕಚೇರಿ, ಮನೆ ಮುಂದೆ ಧರಣಿ ನಡೆಸಲು ಇಪಿಎಸ್-95-ಎನ್‌ಎಸಿ ಸಂಘಟನೆ ನಿರ್ಧರಿಸಿತು.

ನಗರದ ಹೈವೇ ವೃತ್ತದ ಬಳಿ ಇರುವ ಪುತಲೀ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ಇಪಿಎಸ್-95-ಎನ್‌ಎಸಿ ಸಂಘಟನೆಯ 11ನೇ ಮೈಸೂರು ಜಿಲ್ಲಾ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಂಘಟನಾ ಕಾರ್ಯದರ್ಶಿ ವಿಜಯ್ಕುಮಾರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ನಿವೃತ್ತ ಕಾರ್ಮಿಕರ ಭವಿಷ್ಯ ನಿಧಿ ಕನಿಷ್ಠ ಪಿಂಚಣಿ ಜಾರಿ ಸಂಬಂಧದ ಹೋರಾಟ ಮಾಡಲಾಗಿದೆ. ಮುಂದೆ ಜಾರಿಯ ಕುರಿತು ಹೋರಾಟ ರೂಪಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಷಡಕ್ಷರಿ ಮಾತನಾಡಿ, ನಮ್ಮ ಹೋರಾಟದ ಮುಂದಿನ ಭಾಗವಾಗಿ ಮೈಸೂರು ಮತ್ತು ಚಾಮರಾಜನಗರ ಸಂಸದರ ಮನೆ, ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಆ ಮೂಲಕ ಲೋಕಸಭಾ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸುವಂತೆ ಕೋರಲಾಗುವುದು ಎಂದು ಹೇಳಿದರು.

ಕಾರ್ಮಿಕ ಮತ್ತು ಹಣಕಾಸು ಸಚಿವರಿಗೆ ಭವಿಷ್ಯ ನಿಧಿ ಕನಿಷ್ಠ ಪಿಂಚಣಿ 7500 ರೂ. ಜತೆಗೆ ಡಿಎ, ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು ಎನ್ನುವ ಬೇಡಿಕೆಯನ್ನು ಪ್ರಬಲವಾಗಿ ಮುಂದಿಡಲಾಗಿದೆ ಎಂದರು. ಕಳೆದ ಏಳೂವರೆ ವರ್ಷದಿಂದ ಈ ಬಗ್ಗೆ ನೊಂದ ನಿವೃತ್ತ ಕಾರ್ಮಿಕರು ಹೋರಾಟ ಮಾಡುತ್ತಿದ್ದರೂ, ನಮ್ಮ ಸಂಸದರು ಈವರೆಗೆ ಮಾತನಾಡದೆ ಮೌನದಿಂದಿರುವುದು ದುರದೃಷ್ಟಕರ ಎಂದರು.

ಮೈಸೂರು ಜಿಲ್ಲಾ ಸಂಘಟನೆಯ ಟಿ. ಆರ್. ಶ್ರೀಕಂಠಪ್ರಸಾದ್, ಚಾಮರಾಜನಗರ ಜಿಲ್ಲೆಯ ಸಂಘಟನೆ ಅಧ್ಯಕ್ಷ ಮಹದೇವ, ಕಾರ್ಯದರ್ಶಿ ಸೋಮಣ್ಣ, ಖಜಾಂಚಿ ನಂಜುಂಡಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ. ಮಹದೇವು, ಜೆ.ಕೆ.ಟೈರ್ಸ್‌ ಯೂನಿಯನ್‌ನ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಕಾರ್ಯದರ್ಶಿ ಬಸವಣ್ಣ, ಖಜಾಂಚಿ ಬಸವರಾಜು, ಉಪಾಧ್ಯಕ್ಷ ರಾಮೇಗೌಡ, ಮುಖಂಡರಾದ ಆರ್. ಉಮೇಶ್ ಇತರರು ಇದ್ದರು. ಸಕ್ಕರೆ ಕಾರ್ಖಾನೆ, ಕರಿಕಲ್ಲು ಗಾಣಿಗರಿಕೆ ಸೇರಿದಂತೆ ಇನ್ನಿತರ ಅಸಂಘಟಿತ ಕಾರ್ಮಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net