ಪಕ್ಷ ಬಲವರ್ಧನೆಗೆ ಸಂಘಟನಾತ್ಮಕ ಹೋರಾಟ ಅಗತ್ಯ

25arsph2ep
Published on

ಅರಸೀಕೆರೆ: ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಂಘಟನಾತ್ಮಕವಾಗಿ ಹೋರಾಟ ನಡೆಸದಿದ್ದರೆ ಪಕ್ಷ ಬಲವರ್ಧನೆ ಅಸಾಧ್ಯ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೈ.ವಿ.ರವಿಶಂಕರ್ ಹೇಳಿದರು.

ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಗ್ರಾಮಾಂತರ ಹಾಗೂ ನಗರ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿದಿರುವುದು ಪಕ್ಷ ಸಂಘಟನೆಗೆ ನೆರವಾಗಲಿದೆ. ಉಭಯ ಮಂಡಲಗಳ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಮಾತನಾಡಿ, ಪರಸ್ಪರ ದೂರು ನೀಡುವುದು, ಆರೋಪ,ಪ್ರತ್ಯಾರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ವಾಸ್ತವ ಮನಗಂಡು ಮುಂಬರುವ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಲು ಒಗ್ಗಟ್ಟಿನ ಹೋರಾಟ ನಡೆಸಿದರೆ ಯಶಸ್ಸು ದೊರೆಯಲಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರ ನೆರವು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಎಂ.ಜಿ.ಲೋಕೇಶ್ ನಗರಾಧ್ಯಕ್ಷ ಪುರುಷೋತ್ತಮ್ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಲಾಯಿತು.
ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಎ.ಎಸ್.ಬಸವರಾಜ್, ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಎರಡೂ ಮಂಡಲಗಳ ನಿಕಟಪೂರ್ವ ಅಧ್ಯಕ್ಷರಾದ ಜಿವಿಟಿ ಬಸವರಾಜ್, ಮನೋಜ್ ಕುಮಾರ್ ಇತರರಿದ್ದರು. ಬೆಂಗಳೂರು ನಗರ ಜಿಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಿ.ಮರಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net