

ಗೋಕರ್ಣ: ಸಮಾಜದಲ್ಲಿರುವಾಗ ಎಲ್ಲರ ಸಮ್ಮುಖ ಮನುಷ್ಯ ತಪ್ಪು ಎಸಗುವ ಸಂಭವ ಕಡಿಮೆ. ಆದರೆ ಒಬ್ಬಂಟಿಯಾದಾಗ ಋಣಾತ್ಮಕ ಭಾವನೆಗಳು ಹೆಚ್ಚಿ ಉಂಟಾಗುವ ಭಯದಿಂದ ತಪ್ಪು ಮಾಡುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಅಭಯ ನೀಡಿ ವ್ಯಕ್ತಿಗೆ ಶಕ್ತಿ ತುಂಬುವ ಸಮರ್ಥ ಕಾರ್ಯಕ್ಕೆ ಸಂಘಟನೆ ಅಗತ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಮಂಗಳವಾರ ಗೇರುಸೊಪ್ಪ, ಮುಗ್ವಾ ಮತ್ತು ಅಪ್ಸರಕೊಂಡ ವಲಯಗಳ ಶಿಷ್ಯಭಕ್ತರಿಂದ ಹಮ್ಮಿಕೊಂಡಿದ್ದ ಭಿಕ್ಷಾಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಸಂಘಟನೆ ನಮ್ಮ ಜವಾಬ್ದಾರಿ ಮತ್ತು ಸಮಾಜದೆಡೆಗಿನ ನಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಕಾರಣವಾಗುತ್ತದೆ. ಇಂತಹ ಸಂಘಟನೆಯನ್ನು ಸೇವಾಭಾವದಿಂದ, ಸಮಾಜದ ಸ್ವಾಸ್ಥ್ಯಕ್ಕಾಗಿ ಬಲಗೊಳಿಸಬೇಕು ಎಂದರು.
ಸಮಾಜವನ್ನು ಸಹಸ್ರಾರು ವರ್ಷಗಳಿಂದ ಮುನ್ನೆಡೆಸಿದ ಶಿಕ್ಷಕರ ದಿನ ಇಂದು. ನಮಗೆ ಜೀವನ ಶಿಕ್ಷಣ ನೀಡುವ ಗುರುವರ್ಯರ ಸ್ಮರಿಸುವ ದಿನ. ಆದರೆ ವಾಸ್ತವದಲ್ಲಿ ಭಾರತೀಯ ಸಂಸ್ಕೃತಿಯ ನಮ್ಮ ಪ್ರತಿದಿನ ಆರಂಭವಾಗುವುದೇ ಗುರುಸ್ಮರಣೆಯೊಂದಿಗಾಗಿದೆ. ಆದರೆ ಇವತ್ತಿನ ಶಿಕ್ಷಣ ಪದ್ಧತಿ ಮಕ್ಕಳನ್ನು ಸರಿದಾರಿಗೆ ಒಯ್ಯುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ನಮ್ಮ ಗುರುಕುಲ ಪದ್ಧತಿ ಮರೆತಿದ್ದೇ ಶಿಕ್ಷಣ ಕ್ಷೇತ್ರದಲ್ಲಿನ ಇಂದಿನ ಹಲವು ತಳಮಳಗಳಿಗೆ ಕಾರಣ. ಇಂದಿನ ಶಿಕ್ಷಣಕ್ಕೂ ನಂತರದ ವಾಸ್ತವ ಬದುಕಿಗೂ ಅಗಾಧ ಅಂತರವಿದೆ. ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದವರೆಲ್ಲ ಜೀವನದ ಪರೀಕ್ಷೆಯಲ್ಲಿ ಜಯಶಾಲಿಗಳಾಗುತ್ತಾರೆ ಎಂಬ ಖಾತ್ರಿಯಿಲ್ಲ. ಬದುಕಿಗೆ ಉಪಯೋಗವಾಗದ ಇಂಥ ಶಿಕ್ಷಣದಿಂದ ಜೀವನ ಪರಿಪೂರ್ಣವಾಗದು. ದೇಶದ ಭವಿಷ್ಯ ಉಜ್ವಲಗೊಳ್ಳಲು ಮತ್ತು ಮಕ್ಕಳ ಸವಾರ್ಂಗೀಣ ವಿಕಾಸಕ್ಕೆ ಮತ್ತೆ ಸಾಂಪ್ರದಾಯಿಕ ಶಿಕ್ಷಣದತ್ತ ನಾವು ಹೊರಳಬೇಕು ಎಂದರು.
ಮಹತ್ವಾಕಾಂಕ್ಷಿ ಉದ್ದೇಶದ ಸಾಫಲ್ಯಕ್ಕಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಉದಯವಾಗಿದೆ. ಇದರ ಸದುಪಯೋಗವನ್ನು ಎಲ್ಲ ಶಿಕ್ಷಣ ಆಕಾಂಕ್ಷಿಗಳು ಪಡೆಯುವಂತಾಗಲಿ ಎಂದು ಶ್ರೀಗಳು ಹೇಳಿದರು.
ಹವ್ಯಕ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಮತ್ತಿತರರಿದ್ದರು. ಸಭೆಯಲ್ಲಿ 15 ಸಾಧಕರನ್ನು ಮತ್ತು 10 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.