

ಸುಂಟಿಕೊಪ್ಪ: ಕ್ರೀಡೆಯ ಮೂಲಕ ಕ್ರೈಸ್ತರನ್ನು ಒಂದೆಡೆ ಸೇರಿಸುವ ಕೆಲಸ ನಡೆದಿದ್ದು, ಇದರಿಂದಾಗಿ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ನಿರ್ಧಾರ ಈ ಮೂಲಕ ದೃಢಪಟ್ಟಿದೆ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮ ಗುರು ವಿಜಯಕುಮಾರ್ ಹೇಳಿದರು.
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಆಶ್ರಯದಲ್ಲಿ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 14ನೇ ವರ್ಷದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯ ಮೂಲಕ ಸಮುದಾಯದವರೆಲ್ಲರೂ ಒಂದೆಡೆ ಸೇರುವಂತಾಗಿದೆ. ಇದರಿಂದ ಜನಾಂಗದವರೊಂದಿಗೆ ಸೌಹಾರ್ದತೆ ಬೆಸೆಯಲಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದರು.
ಸುಂಟಿಕೊಪ್ಪ ಕಾಂಗ್ರೆಸ್ ಮುಖಂಡ ಪಿ.ಎಂ.ಲತೀಫ್ ಮಾತನಾಡಿ, ಸಮುದಾಯವರು ಒಗ್ಗೂಡಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿದೆ. ಸಮುದಾಯದ ಕಾರ್ಯಕ್ರಮಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳ್ಳುವಂತಾಗಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ಸಮುದಾಯಗಳು ಕ್ರೀಡಾಕೂಟಗಳ ಮೂಲಕ ಒಗ್ಗಟ್ಟಾಗ ಬೇಕೆಂದರು.
ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರಾಡ್ರಿಗಸ್ ಮಾತನಾಡಿ, ಒಂದು ಸಂಘವನ್ನು ಕಟ್ಟುವುದು ಕಷ್ಟ. ಅದರಲ್ಲಿ ನಿರಂತರ ಬೆಳೆಸಿಕೊಂಡು ಹೋಗುವುದು ಕಷ್ಟ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯವಾಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನ ಅಧ್ಯಕ್ಷ ಜಾನ್ಸನ್ ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚೆಟ್ಟಳ್ಳಿ ಚರ್ಚಿನ ಧರ್ಮ ಗುರು ಜೆರಾಲ್ಡ್ ಸಿಕ್ವೇರಾ, ಸುಂಟಿಕೊಪ್ಪ ಸಿಎಸ್‌ಐ ಚರ್ಚಿನ ಧರ್ಮ ಗುರು ಮಧು ಕಿರಣ್, ಸುಂಟಿಕೊಪ್ಪ ಸಂತ ಅಂತೋಣಿ ಸುಪೀರಿಯರ್ ಜೋವಿಟಾ, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ರೆ.ಫಾ.ಗಿಲ್ಬರ್ಟ್ ಡಿಸಿಲ್ವಾ, ಸೋಮವಾರಪೇಟೆ ಒಎಲ್‌ವಿ ಚರ್ಚಿನ ಧರ್ಮಗುರು ಅವಿನಾಶ್, ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಜೋಕಿಂ ವಾಸ್, ಕಾರ್ಯಾಧ್ಯಕ್ಷ ಲಾರೆನ್ಸ್, ಕಾರ್ಯದರ್ಶಿ ಜೂಡಿ ಡೇವಿಡ್ ವಾಸ್, ಖಜಾಂಚಿ ಜೇಮ್ಸ್ ಡಿಸೋಜಾ, ಪಿ.ಎಫ್.ಸಭಾಸ್ಟೀನ್, ಎಂ.ಬಿ.ವಿನ್ಸೆಂಟ್, ಜಿಲ್ಲಾ ಸಮಿತಿ, ತಾಲೂಕು ಸಮಿತಿ ಪದಾಧಿಕಾರಿಗಳಿದ್ದರು.
ಜಿಲ್ಲಾ ಮಟ್ಟದ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯನ್ನು ಸಿಎಸ್‌ಐ ದೇವಾಲಯದ ವಿಲಿಯಂ ಉದ್ಘಾಟಿಸಿದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ 25 ಧರ್ಮ ಕೇಂದ್ರಗಳ 22 ತಂಡಗಳು ಭಾಗವಹಿಸಿವೆ. ಭಾನುವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.