

ನಂಜನಗೂಡು: ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಮೂಡಿಸಲು, ದೇಶದ ನಾಡು ನುಡಿ ಸಂಸ್ಕೃತಿ ಬೆಳೆಸಲು, ವಿವಿಧತೆಯಲ್ಲಿ ಏಕತೆ ಸಾರಲು, ಸಾಮಾಜಿಕ ಜವಾಬ್ದಾರಿಗಳನ್ನು ವಹಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ವಿದ್ಯಾರ್ಥಿ ಸಂಘಗಳು ಬಹಳ ಉಪಯೋಗವಾಗುತ್ತವೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು.
ತಾಲೂಕಿನ ಸುತ್ತೂರು ಜೆಎಸ್‌ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘದ ಈ ಸಾಲಿನ ಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಓದಿನ ಜತೆಗೆ ಸೃಜನಶೀಲತೆಯನ್ನು ಬಳಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಜೆಎಸ್‌ಎಸ್ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಉತ್ತಮ ಶಿಕ್ಷಣ ನೀಡುವುದರ ಜತೆಗೆ ಸಂಸ್ಕಾರವನ್ನು ಸಹ ನೀಡುತ್ತಿರುವುದು ತುಂಬಾ ಸಂತೋಷದ ವಿಷಯ. ಜೆಎಸ್‌ಎಸ್ ಸಂಸ್ಥೆಗಳಲ್ಲಿ ಓದಿರುವ ಹಲವಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಶಿಕ್ಷಣದ ತೆ ಮೌಲ್ಯಗಳನ್ನು ಕಲಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಶಾಲೆಯಲ್ಲಿ ಕಲಿಕೆಯಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಜಿ. ಮಹದೇವಸ್ವಾಮಿ, ನಮ್ಮ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಅನುಕೂಲಕರವಾಗಿರಲಿಲ್ಲ. ಸುತ್ತೂರು ಶ್ರೀಗಳು ವಿದ್ಯಾಭ್ಯಾಸಕ್ಕೆ ಹಲವು ಅನುಕೂಲಗಳನ್ನು ಕಲ್ಪಿಸಿದ್ದಾರೆ. ರಾಜೇಂದ್ರ ಶ್ರೀಗಳಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಶ್ರೀಗಳ ಆಶೀರ್ವಾದದಿಂದ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಪ್ರೊ. ಕೆ.ಜಿ.ಮಹದೇವಸ್ವಾಮಿ ಅವರ ಪತ್ನಿ ಉಮಾದೇವಿ ವಚನಗಾಯನವನ್ನು ನಡೆಸಿಕೊಟ್ಟರು. ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್, ಸುತ್ತೂರು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಉಮೇಅಸ್ಮಾ, ಜೆಎಸ್‌ಎಸ್ ಸಂಸ್ಥೆಗಳ ಮುಖ್ಯಸ್ಥರಾದ ಜಿ.ಎಲ್.ತ್ರಿಪುರಾಂತಕ, ವೀರಭದ್ರಯ್ಯ, ಡಾ.ಎಚ್.ಎಂ. ಮಹೇಶ್, ಎಂ.ರಾಜಶೇಖರಮೂರ್ತಿ, ಜಿ.ಶಿವಮಲ್ಲು, ಮ.ಗು.ಬಸವಣ್ಣ, ಜಿ.ಎಂ.ಷಡಕ್ಷರಿ, ಜಿ.ಶಿವಸ್ವಾಮಿ, ಮಹದೇವಪ್ರಸಾದ್, ಪಿ.ಸುಶೀಲಾ ಇತರರಿದ್ದರು.