ಸಂಘಟನೆ ಬೆಳೆಸುವುದು ಕಷ್ಟದ ಕೆಲಸ

18 Jaggu 5
ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ನಗಬೇಕರಿ-ನಗಬೇಕ್ರಿ’ ಕಾರ್ಯಕ್ರಮದಲ್ಲಿ ಎಚ್.ಡುಂಡಿರಾಜ್ ಅವರನ್ನು ಸನ್ಮಾನಿಸಲಾಯಿತು. ಎಲ್.ಎಸ್. ಶಾಸಿ, ಡಾ.ಅರವಿಂದ ಕುಲಕರ್ಣಿ, ಪ್ರೊ. ಜಿ.ಕೆ. ಕುಲಕರ್ಣಿ, ಕೆ. ತಾನಾಜಿ ಇದ್ದರು.
Published on

ಬೆಳಗಾವಿ: ಸಂಘಟನೆ ಆರಂಭಿಸುವುದು ಸುಲಭ ಮುಂದುವರಿಸಿಕೊಂಡು ಹೋಗುವುದು ತುಂಬ ಕಷ್ಟದ ಕೆಲಸ. ಹೀಗಿರುವಾಗ ಹಾಸ್ಯಕೂಟ ಯಶಸ್ವಿ 11 ವರ್ಷ ಪೂರೈಸಿ 12ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವುದು ಸಂತಸದ ವಿಷಯ ಎಂದು ಹನಿಗವಿ ಎಚ್. ಡುಂಡಿರಾಜ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಹಾಸ್ಯಕೂಟದ ವಾರ್ಷಿಕೋತ್ಸವ ನಿಮಿತ್ತ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ನಗಬೇಕರಿ-ನಗಬೇಕ್ರಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ಭಾಷಣದುದ್ದಕ್ಕೂ ಹನಿಗವನ ಹೇಳುತ್ತ ಜನರನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಎಲ್.ಎಸ್. ಶಾಸಿ ಮಾತನಾಡಿ, ಹಿರಿಯ ಕವಿಗಳ ಕವಿತೆಗಳನ್ನು ಓದಿ ಸತತಾಭ್ಯಾಸ ಮಾಡುವುದರಿಂದ ಒಳ್ಳೆಯ ಕವಿತೆಗಳನ್ನು ಬರೆಯಲು ಸಾಧ್ಯ ಎಂದರು. ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಮಾತನಾಡಿ, ಡುಂಡಿರಾಜರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ರಚನೆ ಮಾಡಿದ್ದರೂ ಹನಿಗವಿಯಂದೇ ಚಿರಪರಿಚಿತರು. ಇವರು ಉತ್ತಮ ನಾಟಕಗಳನ್ನು ರಚಿಸಿದ್ದಾರೆ. ಇವರ ‘ಪುಕ್ಕಟ ಸಲಹೆ’ ನಗೆ ನಾಟಕ ನೂರು ಪ್ರಯೋಗಗಳನ್ನು ಕಂಡಿದೆ. ರಂಗಸಂಪದ ತಂಡದಿಂದ ಅದೇ ನಾಟಕವನ್ನಾಡುವ ಯೋಜನೆ ಹೊಂದಿದೆ ಎಂದರು. ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಮಾತನಾಡಿದರು. ನಗೆ ಮಾತುಗಾರ ಪ್ರೊ. ಜಿ.ಕೆ. ಕುಲಕರ್ಣಿ ಮತ್ತು ಕೆ. ತಾನಾಜಿ ಜನರನ್ನು ರಂಜಿಸಿದರು. ಎಸ್‌ಬಿಐ ನಿವೃತ್ತ ಶಾಖಾಕಾರಿ ಅರವಿಂದ ಹುನಗುಂದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಎಂ.ಬಿ. ಹೊಸಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net