

ಚಾಮರಾಜನಗರ: ಪ್ರತಿಯೊಬ್ಬರೂ ಸಂಘಟಕರಾಗುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಹಾಗೆಯೆ, ಸರ್ಕಾರದ ಸವಲತ್ತು ಪಡೆಯಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ತಿಳಿಸಿದರು.
ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ಕುಂದು, ಕೊರತೆ ಸಂಬಂಧ ಆಯೋಜಿಸಿದ್ಧ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯಲ್ಲಿ ಈ ವರ್ಷ ಮಳೆಯಿಲ್ಲದ ಪರಿಣಾಮ ಅನೇಕ ರೈತರು ಬಿತ್ತನೆ ಮಾಡಿ ಬೆಳೆ ಬಾರದೇ ನಷ್ಟವನ್ನು ಅನುಭವಿಸಿದ್ದು, ತುಂಬಾ ತೊಂದರೆಗೆ ಸಿಲುಕಿದ್ದಾರೆ ಎಂದರು.
ಆದರೆ ಸರ್ಕಾರ ತಾಲೂಕನ್ನು ಸಾಧಾರಣಾ ಬರ ಪಟ್ಟಿಗೆ ಸೇರಿಸಿದ್ದು, ಅನ್ಯಾಯವೆಸಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಸಂಘಟನೆಯಾಗಬೇಕು. ಇದರಿಂದ ಸರ್ಕಾರದಿಂದ ಸೂಕ್ತ ಪರಿಹಾರ ಪಡೆಯಲು ಸಾಧ್ಯ. ಅಲ್ಲದೇ ಇತ್ತೀಚೆಗೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಚಿಕ್ಕಸ್ವಾಮಿ ಮಾತನಾಡಿ, ಈ ಭಾಗದಲ್ಲಿ ಕೆಲವರು ಅನ್ಯರ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯುವುದರ ಮೂಲಕ ನಿಜ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ಆದ್ದರಿಂದ ರೈತ ಸಂಘಟನೆಯ ಮೂಲಕ ಈ ಬಗ್ಗೆ ಕ್ರಮವಾಗಬೇಕಿದೆ ಎಂದು ಮನವಿ ಮಾಡಿದರು.
ರೈತ ಮುಖಂಡ ವಿಶ್ವೇಶ್ವರ್ ಪ್ರಸಾದ್ ಮಾತನಾಡಿದರು. ತಾಲೂಕು ಯುವ ಘಟಕದ ಅಧ್ಯಕ್ಷ ಸೂರ್ಯ, ಪುದು ರಾಮಾಪುರ ಗ್ರಾಮ ಘಟಕದ ಅಧ್ಯಕ್ಷ ವೇಲುಸ್ವಾಮಿ, ರೈತ ಮುಖಂಡರಾದ ಶಿವರಾಮು, ಚಂದ್ರು, ಮಹದೇವಪ್ಪ, ಮಹದೇವ, ಶೇಖರ್ ಇತರರು ಇದ್ದರು.