ಮೈಸೂರು: ಶಿಕ್ಷಣ ಇಲಾಖೆಯ ಆವಿಷ್ಕಾರ ವಿಭಾಗದಿಂದ ನಗರದ ಎನ್‌ಐಇ ಕಾಲೇಜಿನಲ್ಲಿ ಡಿ.19 ರಿಂದ 23ರವರೆಗೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆಯೋಜಿಸಲಾಗಿದೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನ ವಿಭಾಗದ ಅಧಿಕಾರಿ ಹರ್ಷಿತ್ ದಿವಾಕರ್ ತಿಳಿಸಿದರು.
ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಫಿನಾಲೆಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಇವರಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವವರು ಗ್ರ್ಯಾಂಡ್ ಫಿನಾಲೆ ಸಮಯದಲ್ಲಿ ಸಮಸ್ಯೆ, ವಿವರಗಳ ಮೇಲೆ ಕೆಲಸ ಮಾಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರೀಯ ಶಿಕ್ಷಣ ಸಚಿವಾಲಯದ ನವೀನ ಕೋಶ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಆಯ್ಕೆ ಮಾಡಿರುವ 47 ಸಂಯೋಜಕ ಕೇಂದ್ರಗಳಲ್ಲಿ ಎನ್‌ಐಇ ಕಾಲೇಜು ಸಹ ಒಂದಾಗಿದೆ ಎಂದು ಹೇಳಿದರು.
ಡಿ.19 ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಿಜ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಒದಗಿಸುವ ರಾಷ್ಟ್ರ ಮಟ್ಟದ ಕೆಲಸ ಇದಾಗಿದೆ. ಪ್ರತಿ ಸಂಯೋಜಕ ಕೇಂದ್ರದಲ್ಲಿಯೂ ವಿದ್ಯಾರ್ಥಿ ತಂಡಗಳು, ಕೈಗಾರಿಕಾ ತಜ್ಞರು, ವಿನ್ಯಾಸ ಮಾರ್ಗದರ್ಶಕರು, ಮೌಲ್ಯಮಾಪಕರು ಅಷ್ಟೂ ದಿನ 24 ಗಂಟೆ ಕೆಲಸ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.
ಪ್ರತಿವರ್ಷ ಪ್ರಧಾನಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದು, ಈ ವರ್ಷವೂ ಸಂವಹನ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಪ್ರೊ.ಎನ್.ಎಸ್.ಶ್ರೀಕಾಂತ್, ಪ್ರೊ.ವಿವೇಕ್ ಭಾರಧ್ವಾಜ್ ಇತರರು ಇದ್ದರು.