ಕೃಷಿ ತಕ್ಷಣ ಲಾಭಕ್ಕಾಗಿ ಮಾಡುವ ಕೆಲಸವಲ್ಲ

563a5753-0f9c-4f5c-9dbe-287d240f7b73
ಹುಣಸೂರು ತಾಲೂಕು ಕರಿಮುದ್ದನಹಳ್ಳಿ ಗ್ರಾಮದ ಪರಮೇಶ ಎಂಬ ರೈತರ ತೋಟಲ್ಲಿ ಇತ್ತೀಚೆಗೆ ಸಮಗ್ರ ಕೃಷಿ ಮತ್ತು ಸ್ವಯಂ ಉದ್ಯೋಗಗಳ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಸಾವಯವ ಪ್ರಗತಿಪರ ಕೃಷಿಕ ಬನ್ನಿಕುಪ್ಪೆ ಚೆಲುವರಾಜ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನಾ ಅಧಿಕಾರಿ ಧನಂಜಯ ಉದ್ಘಾಟಿಸಿದರು. ಶಿವಶಂಖರ್, ಇತರರಿದ್ದರು.
Published on

ಸಾವಯವ ಪ್ರಗತಿಪರ ಕೃಷಿಕ ಚೆಲುವರಾಜ್ ಹೇಳಿಕೆ

ಬನ್ನಿಕುಪ್ಪೆ : ಕೃಷಿಯನ್ನು ಖುಷಿಯಿಂದ ಮಾಡಿದರೆ ಮಾತ್ರ ರೈತ ಬೆಳೆಯನ್ನು ಕಾಣಲು ಸಾಧ್ಯ. ಕೃಷಿಯನ್ನು ಆಡಂಬರದಿಂದ ಅಥವಾ ತಕ್ಷಣ ಲಾಭಕ್ಕಾಗಿ ಮಾಡುವ ಕೆಲಸವಲ್ಲ ಎಂದು ಸಾವಯವ ಪ್ರಗತಿಪರ ಕೃಷಿಕ ಚೆಲುವರಾಜ್ ತಿಳಿಸಿದರು.

ಹುಣಸೂರು ತಾಲೂಕು ಕರಿಮುದ್ದನಹಳ್ಳಿ ಗ್ರಾಮದ ಪರಮೇಶ ಎಂಬ ರೈತರ ತೋಟಲ್ಲಿ ಇತ್ತೀಚೆಗೆ ಸಮಗ್ರ ಕೃಷಿ ಮತ್ತು ಸ್ವಯಂ ಉದ್ಯೋಗಗಳ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಭೂಮಿ ತಾಯಿಯನ್ನು ನಂಬಿದವರು ಯಾರೂ ಕೆಟ್ಟಿಲ್ಲ. ನಾವು ಖಾಸಗಿ ಅಥವಾ ಸರ್ಕಾರಿ ನೌಕರಿಗೆ ಕೊಡುವ ಸಮಯ ಮತ್ತು ಗೌರವವನ್ನು ಭೂಮಿ ತಾಯಿಗೆ ನೀಡಿದರೆ ಉತ್ತಮ ಫಲ ಸಿಗುತ್ತದೆ. ಆದರೆ ರೈತ ದುಡ್ಡಿನ ಆಸೆಗಾಗಿ ಭೂಮಿಗೆ ರಸಗೊಬ್ಬರವನ್ನು ಹಾಕಿ ವಿಷದ ಆಹಾರವನ್ನು ತಾನು ಸವಿಯುುತ್ತಾನೆ. ಪ್ರಕೃತಿಯನ್ನು ನಂಬಿ ಪ್ರಕೃತಿಯುತವಾದ ಕಾಡು ಕೃಷಿಯಲ್ಲಿ ತೊಡಗಿದರೆ ರೈತ ಜಮೀನಿನಲ್ಲಿ ಅರಣ್ಯ ಕೃಷಿ ಜತೆಗೆ ಇರುವ ಜಮೀನಿನಲ್ಲಿ ಆದಷ್ಟು ಮರ ಗಿಡಗಳನ್ನು ಮತ್ತು ಕಾಡು ಕೃಷಿಯನ್ನು ಮಾಡುತ್ತ ಮುಂದಿನ ಪೀಳಿಗೆಗೆ ಕೃಷಿಯಿಂದ ಉದ್ಯೋಗವನ್ನು ಸೃಷ್ಟಿ ಮಾಡಬಹುದು ಎಂದರು.

ಭೂಮಿಯಲ್ಲಿ ಅರಣ್ಯ ಕೃಷಿ ಜತೆಗೆ ತೆಂಗು, ಅಡಕೆ, ಮಾವು, ಸಪೋಟ, ಕಿತ್ತಳೆ, ಕಾಳುಮೆಣಸು, ಕಾಫಿ, ಸೊಪ್ಪು-ತರಕಾರಿಗಳನ್ನು ಹಾಗೂ ಅಣಬೆ ಕೃಷಿಗಳನ್ನು ಮಾಡಬಹುದು. ಮೂರು ತಿಂಗಳಿಂದ ಐದಾರು ವರ್ಷದವರೆಗೆ ಈ ಎಲ್ಲ ಕೃಷಿಯಿಂದಲೂ ರೈತನ ಲಾಭವನ್ನು ಮತ್ತು ಉದ್ಯೋಗವನ್ನು ನೀಡಬಹುದು. ಹಳ್ಳಿಯ ಮಹಿಳೆಯರು ಖಾಸಗಿ ಕಂಪನಿಗಳಿಗೆ ಹೋಗಿ ದುಡಿಯುವ ಬದಲು ತಮ್ಮ ಜಮೀನಿನಲ್ಲಿರುವ ಕಡಿಮೆ ನೀರಿನಲ್ಲಿ ಕೈತೋಟ, ಸೊಪ್ಪು-ತರಕಾರಿ, ಹೂವು, ಅಣಬೆ, ನಾಟಿ ಕೋಳಿ ಸಾಕಣೆ ಮುಂತಾದ ಉಪಕಸುಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನ ಅಧಿಕಾರಿ ಧನಂಜಯ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯಲ್ಲಿ ಸಿಗುವ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕ ಶಿವಶಂಕರ್, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಪಿಬಿಜಿ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು, ಸಂಘದ ಮಹಿಳಾ ಮತ್ತು ಪುರುಷ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net