

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂತರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ-2023 ನಿಮಿತ್ತ ಬೆಂಗಳೂರಿನ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಅಂಗ ಸಂಸ್ಥೆ ಶ್ರೀ ನೈಸರ್ಗಿಕ ಹಾಗೂ ಬೆಂಗಳೂರು ಕೃಷಿ ವಿವಿ ಆಶ್ರಯದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆವರಣದಲ್ಲಿ ಡಿ. 9ರಿಂದ 11ರವರೆಗೆ ವಿಶ್ವ ಸಿರಿಧಾನ್ಯಗಳ ಸಾವಯವ ಮತ್ತು ನೈಸರ್ಗಿಕ ಕೃಷಿ ಮೇಳ ಹಾಗೂ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮೇಳದ ಸಂಘಟನಾ ಕಾರ್ಯದರ್ಶಿ ಉದಯಕುಮಾರ ಕೊಳ್ಳಿಮಠ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 9ರಂದು ಮೇಳವನ್ನು ಕೃಷಿ ಸಚಿವ ಚೆಲುವರಾಯ ಸ್ವಾಮಿ ಉದ್ಘಾಟಿಸುವರು. ಡಿ. 10ರಂದು ನೈಜ ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಗುಣಾತ್ಮಕ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಕುರಿತ ವಿಚಾರ ಸಂಕಿರಣವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸುವರು. ಆರ್ಟ್ ಆಫ್‌ಲಿವಿಂಗ್‌ನ ಮುಖ್ಯಸ್ಥೆ ಶ್ರೀ ಶ್ರೀ ರವಿಶಂಕರ ಗುರೂಜಿ ಸಾನ್ನಿಧ್ಯ ವಹಿಸುವರು. ಡಾ. ಅಶೋಕ ದಳವಾಯಿ, ಡಾ. ಅಶೋಕ ಆಲೂರ, ಸಿರಿಧಾನ್ಯಗಳ ತಜ್ಞ ಡಾ. ಖಾದರ ವಲ್ಲಿ, ಇತರರು ಪಾಲ್ಗೊಂಡು ರೈತರ ಸಮಸ್ಯೆ-ಸವಾಲುಗಳಿಗೆ ಪರಿಹಾರ ಒದಗಿಸಿ ವಿಶೇಷವಾಗಿ ಸಿರಿಧಾನ್ಯಗಳ, ಸಾವಯವ ಮತ್ತು ನೈಸರ್ಗಿಕ ಕೃಷಿ ಸಂವರ್ಧನೆಗೆ ಪೂರಕ ಸಲಹೆಗಳನ್ನು ನೀಡಲಿದ್ದಾರೆ ಎಂದರು.
ಮೇಳದಲ್ಲಿ ಮುಖ್ಯವಾಗಿ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಆಹಾರ ಸಂಸ್ಕರಣೆ ಸಂಸ್ಥೆಗಳು, ರಫ್ತುದಾರರು, ಸರ್ಕಾರಿ ಸಂಸ್ಥೆಗಳು ಸೇರಿ ವಿವಿಧ ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಸಂಘಟನೆಗಳು ಆಸಕ್ತಿಯಿಂದ ಪಾಲ್ಗೊಳ್ಳಲಿವೆ. ಈ ವಿಶ್ವ ಸಿರಿಧಾನ್ಯಗಳ ಸಾವಯವ ನೈಸರ್ಗಿಕ ಕೃಷಿ ಮೇಳವು ಖರೀದಿದಾರರು, ಮಾರಾಟಗಾರರ ಸಂಪರ್ಕ ಸೇತುವೆಯಾಗಿ ಕಾರ್ಯ ಮಾಡಲಿದೆ. 3 ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರು ಪಾಲ್ಗೊಂಡು ಈ ಮೇಳದ ಪ್ರಯೋಜನ ಪಡೆಯಬೇಕು ಎಂದರು.
ಡಾ. ಗುರುಮೂರ್ತಿ ಯರಗಂಬಳಿಮಠ, ಇತರರು ಇದ್ದರು.