

ಹನೂರು: ಮೆಕಾನಿಕಲ್ ಇಂಜಿನಿಯರೊಬ್ಬರು ರಸಾಯನಿಕಮುಕ್ತ ಕೃಷಿಗೆ ಪ್ರಾಧಾನ್ಯತೆ ನೀಡುವ ಸಲುವಾಗಿ ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೆ. ಗುಂಡಾಪುರ ಗ್ರಾಮದ ಚಂದ್ರಶೇಖರ್ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿರುವ ಕೃಷಿಕ. ಇವರು ಬಸಪ್ಪನದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಅಜ್ಜೀಪುರದ ಜೆಎಸ್‌ಎಸ್ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಶಿಕ್ಷಣ ಪಡೆದಿದ್ದು, 1995 ರಿಂದ 5 ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ತಂದೆ ಕಾಲವಾದ ಬಳಿಕ ಅನಾರೋಗ್ಯಕ್ಕೆ ಒಳಗಾದ ಇವರು ಒಂದು ವರ್ಷ ಮನೆಯಲ್ಲೇ ವಿಶ್ರಾಂತಿ ಪಡೆಯುವಂತಾಯಿತು. ಈ ವೇಳೆ ಉತ್ತಮ ಆಹಾರವೇ ಔಷಧ ಎಂದರಿತು ಪ್ರಕೃತಿ ಮಡಿಲಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಂಕಲ್ಪ ತೊಟ್ಟು ಕೃಷಿ ಕಾಯಕಕ್ಕೆ ಧುಮುಕಿದರು. ಪಿತ್ರಾರ್ಜಿತ 3 ಎಕರೆಯಲ್ಲಿ ಕೃಷಿ ಆರಂಭಿಸಿದರು. ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಆರಂಭದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸಿ ಅರಿಶಿಣ, ಕಬ್ಬು ಇತರ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸಿದರು. ಆದರೆ, ಮಣ್ಣಿನ ಫಲವತ್ತತೆ ಕ್ಷೀಣ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ ರಾಸಾಯನಿಕ ಆಹಾರದ ಪ್ರಭಾವವನ್ನು ಮನಗಂಡ ಇವರು ರಾಸಾಯನಿಕ ಗೊಬ್ಬರಕ್ಕೆ ಗುಡ್‌ಬೈ ಹೇಳಿದರು. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿರುವ ಚಂದ್ರಶೇಖರ್ ಆರಂಭದಲ್ಲಿ ಭತ್ತ ಬೆಳೆದು ಯಶಸ್ಸು ಕಂಡರು. ಬಳಿಕ ಪ್ರಾಯೋಗಿಕವಾಗಿ ಅರ್ಧ ಎಕರೆಯಲ್ಲಿ 45 ಟನ್ ಕಬ್ಬು ಹಾಗೂ 1 ಎಕರೆಯಲ್ಲಿ ಉತ್ತಮ ಬಾಳೆ ಫಸಲನ್ನು ಬೆಳೆದರು. ಪ್ರಸ್ತುತ 1 ಎಕರೆಯಲ್ಲಿ ಅಡಕೆ ಮರ ಬೆಳೆದಿದ್ದಾರೆ. 1 ಎಕರೆಯಲ್ಲಿ ಅರಿಶಿಣ, ಒಂದು ಎಕರೆಯಲ್ಲಿ ನೇಪಿಯರ್ ಹುಲ್ಲು, ಈರುಳ್ಳಿ ಹಾಗೂ ಬಾಳೆಯನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಅಗತ್ಯ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಿರುವ ಇವರು ಸಾವಯವ ಕೃಷಿಯಲ್ಲಿ ಉತ್ತಮ ಅನುಭವವನ್ನು ಹೊಂದುವುದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಸಾವಯವ ಗೊಬ್ಬರ, ಜೀವಾಮೃತದ ಭಂಡಾರ: ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಇವರು ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಒಣಮೇವಿನ ಕಸದಿಂದ ಹೊದಿಕೆ ಗೊಬ್ಬರವನ್ನು ಜಮೀನಿನಲ್ಲಿ ತಯಾರಿಸಿಕೊಳ್ಳುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ. ಬೆಳೆಗಳಿಗೆ ರೋಗಬಾಧೆ ತಗುಲದಂತೆ ಇನ್ನಿಲ್ಲದ ಕಾಳಜಿಯನ್ನು ವಹಿಸಿರುವ ಇವರು ಬೆಲ್ಲ, ಕಡ್ಲೆಹಿಟ್ಟು, ಗಂಜಲ ಹಾಗೂ ಸಗಣಿಯಿಂದ ತಯಾರಿಸಿದ ಜೀವಾಮೃತ ಹಾಗೂ ಗೋ ಕೃಪಾಮೃತವನ್ನು ಬೆಳೆಗಳಿಗೆ ಸಿಂಪಡಿಸುತ್ತಿದ್ದಾರೆ. ಅಲ್ಲದೇ ಬೇವು, ಹರಳೆಲೆ, ಸೀತಾಫಲ, ಹೊಂಗೆ, ಬೆಪ್ಪಲೆಲೆ, ಲಕ್ಕಿ ಇತರ ಮೇಕೆ, ಕುರಿ ಮೇಯದ 10 ಎಲೆಗಳಿಂದ ತಯಾರಿಸಿದ ದಶಪರಣಿ ಜೀವಾಮೃತವನ್ನು ಬೆಳೆಗಳಿಗೆ ಬಳಸುತ್ತಿರುವುದು ವಿಶೇಷವಾಗಿದೆ. ಗೊಬ್ಬರ ಹಾಗೂ ಜೀವಾಮೃತವನ್ನು ಇವರೇ ಸ್ವತಃ ತಯಾರಿಕೆಯ ಅನುಭವವನ್ನು ಹೊಂದಿದ್ದು, ಕೃಷಿ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ಹಾಗಾಗಿ, ಕೃಷಿ ಇಲಾಖೆಯ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿ ತಯಾರಿಕೆಯ ವಿಧಾನವನ್ನು ರೈತರಿಗೆ ತಿಳಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ.
ಹೈನುಗಾರಿಕೆಗೂ ಒತ್ತು: ಚಂದ್ರಶೇಖರ್ ಹೈನುಗಾರಿಕೆಗೂ ಒತ್ತು ನೀಡಿದ್ದು, 30 ಕುರಿ ಹಾಗೂ 4 ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಆದಾಯ ಗಳಿಸುತ್ತಿದ್ದು, ಹೈನುಗಾರಿಕೆ ವೃದ್ಧಿಯ ಚಿಂತನೆಯಲ್ಲಿದ್ದಾರೆ. ಜತೆಗೆ ಜಮೀನಿನಲ್ಲಿ 20 ತೆಂಗಿನ ಮರಗಳಿದ್ದು, ಕೊಬ್ಬರಿ ಎಣ್ಣೆ ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರಸ್ತುತ ಇನ್ನು 40 ತೆಂಗಿನ ಸಸಿಗಳನ್ನು ಹಾಕಿ ಬೆಳೆಸುತ್ತಿದ್ದಾರೆ. ಜೀವಾಮೃತ, ಗೊಬ್ಬರ ಮಾರಾಟಕ್ಕೆ ಅರ್ಜಿ: ಸಾವಯವ ಕೃಷಿ ಪದ್ಧತಿಯ ಮೂಲಕ ಯಶಸ್ಸು ಕಂಡಿರುವ ಇವರು ಜೀವಾಮೃತ ಹಾಗೂ ಗೊಬ್ಬರ ತಯಾರಿಕೆಯಲ್ಲಿ ಉತ್ತಮ ಅನುಭವವನ್ನು ಹೊಂದಿದ್ದು, ಜಮೀನಿನಲ್ಲಿಯೇ ತಯಾರು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಗೊಬ್ಬರ ಹಾಗೂ ಜೀವಾಮೃತವನ್ನು ಮಾರಾಟ ಮಾಡುವ ಉದ್ದೇಶದಿಂದ ಅನುಮತಿಗಾಗಿ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಬೆಳೆದ ಬೆಳೆಗಳಿಗೂ ಮಾರುಕಟ್ಟೆ ಒದಗಿಸುವ ಚಿಂತನೆಯಲ್ಲಿದ್ದಾರೆ. ಉತ್ತಮ ಆರೋಗ್ಯವನ್ನು ಹೊಂದುವ ಸಲುವಾಗಿಯೇ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಇವರು ಬೆಳೆಯುವ ಎಲ್ಲ ಫಸಲು ರಾಸಾಯನಿಕಮುಕ್ತವಾಗಿದೆ. ಇಲ್ಲಿ ಬೆಳೆದ ಆಹಾರ ಪದಾರ್ಥಗಳನ್ನೇ ಅಗತ್ಯಕ್ಕೆ ತಕ್ಕಂತೆ ಮನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಬದನೆ, ಟೊಮ್ಯಾಟೋ, ಮೆಣಸಿನಕಾಯಿ, ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಸಾವಯವ ಕೃಷಿ ಕೈ ಹಿಡಿದಿದ್ದು, ನೆಮ್ಮದಿಯುತ ಜೀವನ ನಡೆಸಲು ಕಾರಣವಾಗಿದೆ. ಕೃಷಿಗೆ ಪತ್ನಿ ಭಾಗ್ಯಾ ಬೆನ್ನೆಲುಬಾಗಿ ನಿಂತಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿ ಉತ್ತಮ ಆರೋಗ್ಯವನ್ನು ಹೊಂದುವ ಸಲುವಾಗಿಯೇ ಮೆಕಾನಿಕಲ್ ಇಂಜಿನಿಯರ್ ಹುದ್ದೆಯನ್ನು ತ್ಯಜಿಸಿ ಸಾವಯವ ಕೃಷಿಕರಾದ ಚಂದ್ರಶೇಖರ್ ಸಮಗ್ರ ಬೇಸಾಯ ಪದ್ಧತಿಯನ್ನು ಅನುಸರಿಸಿ ಆರೋಗ್ಯಯುತ ಬದುಕನ್ನು ರೂಪಿಸಿಕೊಂಡಿರುವುದು ನಿಜಕ್ಕೂ ಸಾರ್ಥಕತೆ ಎನಿಸಿದೆ.
ಮೆಕಾನಿಕಲ್ ಇಂಜಿನಿಯರ್ ಶಿಕ್ಷಣ ಪಡೆದರೂ ನನಗೆ ಹಿಂದಿನಿಂದಲೂ ಕೃಷಿಯ ಬಗ್ಗೆ ಆಸಕ್ತಿ ಇತ್ತು. ಆದರೆ, ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯಕ್ಕೆ ಒಳಗಾದ ವೇಳೆ ಉತ್ತಮ ಆರೋಗ್ಯವನ್ನು ಹೊಂದುಬೇಕು ಎಂದು ನಿರ್ಧರಿಸಿ ಕೃಷಿಯಲ್ಲಿ ತೊಡಗಿದೆ. ಸಾವಯವ ಕೃಷಿ ಪದ್ಧತಿ ಅನುಸರಿಸಿದೆ. ಇದೇ ಆಹಾರವನ್ನು ಸೇವಿಸುತ್ತಿರುವುದರಿಂದ ಆರೋಗ್ಯ ಸುಧಾರಿಸಿದೆ. ಉತ್ತಮ ಬದುಕನ್ನು ರೂಪಿಸಿಕೊಟ್ಟಿದೆ. ಹಾಗಾಗಿ, ಕೃಷಿಯೇ ನನ್ನ ಜೀವನ. ಚಂದ್ರಶೇಖರ್, ರೈತ, ಕೆ. ಗುಂಡಾಪುರ.