

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಾವಯವ ಕೃಷಿ ಹಾಗೂ ಕೃಷಿ ಮೇಳಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಸಹಜ ಸಮೃದ್ಧಿ ಸಂಸ್ಥೆ ಹುಬ್ಬಳ್ಳಿಯ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ ಮತ್ತು ಹಲಸಿನ ಹಬ್ಬವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿ ಚಟುವಟಿಕೆಯ ಜತೆ ದೇಶೀಯ ತಳಿ ಸಂರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರೈತ ಮಹಿಳೆಯರು ಸಹ ಈ ಕಾರ್ಯದಲ್ಲಿ ಕೈ ಜೋಡಿಸಿರುವುದನ್ನು ನೋಡಿದ್ದೇವೆ ಎಂದರು.
ಸಾಲು ಮರದ ತಿಮ್ಮಕ್ಕ ಸ್ವಇಚ್ಛೆಯಿಂದ ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಅದೇ ರೀತಿ ಮಹಿಳೆಯರು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ ಮಾತನಾಡಿ, ಹಲಸು ಮಲೆನಾಡು ಪ್ರದೇಶಕ್ಕೆ ಸೀಮಿತವಾದ ಬೆಳೆ ಎಂದು ಭಾವಿಸಲಾಗಿದೆ. ಹಲಸಿನಿಂದ ವೈವಿಧ್ಯಮಯ ತಿನಿಸುಗಳನ್ನು ತಯಾರಿಸಬಹುದು ಎಂದರು.
ಸಹಜ ಸಮೃದ್ಧಿ ಸಂಸ್ಥೆಯ ನಿರ್ದೇಶಕ ಜಿ.ಕೆ. ಕೃಷ್ಣಪ್ರಸಾದ ಮಾತನಾಡಿ, ಅತಿವೃಷ್ಟಿ ಮತ್ತು ಬರಗಾಲದಿಂದ ಕೆಲವು ಬೆಳೆಗಳು ನೆಲಕಚ್ಚುತ್ತವೆ. ಆದರೆ, 10 ವರ್ಷಗಳ ಬರಗಾಲದಲ್ಲೂ ಹಲಸಿನ ಮರ ಜೀವಂತವಾಗಿ ಇರುತ್ತದೆ. ವಾಣಿಜ್ಯ ಉದ್ದೇಶದಿಂದಲೂ ಹಲಸನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು. ಸಾವಿರ ಹಲಸಿನ ಮರಗಳನ್ನು ಹೊಂದಿ ಕೈ ತುಂಬಾ ಆದಾಯ ಗಳಿಸುತ್ತಿರುವವರು ನಮ್ಮ ಮುಂದೆ ಇದ್ದಾರೆ. ಇಂದು ಕೆಂಪು ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ ಎಂದರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಸಹಜ ಸಮೃದ್ಧಿ ಸಂಸ್ಥೆ ಹೊರ ತಂದ ಹಲಸಿನ ವೈವಿಧ್ಯಮಯ ತಿನಿಸುಗಳು ಪುಸ್ತಕ ಬಿಡುಗಡೆ ಮಾಡಿದರು. ಹಲಸಿನ ತಳಿ ಸಂರಕ್ಷಕ ಪುಟ್ಟಪ್ಪ ಕುಂದಗೋಳ, ಶಂಕರ ಕೆಂಪು ಹಲಸಿನ ತಳಿ ಸಂರಕ್ಷಕ ಕೆಂಪರಾಜು ಸಿ.ಎಸ್., ರೈತ ಮಹಿಳೆಯರಾದ ಕಮಲ ಕಾನಣ್ಣವರ, ಸಾವಿತ್ರಿ ಕೊಡ್ಲಿ ಮಾತನಾಡಿದರು. ಸಹಜ ಆರ್ಗಾನಿಕ್ಸ್ ನಿರ್ದೇಶಕ ಅನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತನಾಡಿದರು. ಶಶಿಕಾಂತ ಬಿಜವಾಡ ಇದ್ದರು.
ಕೆಂಪು, ಶಂಕರ, ಬೀಜ ರಹಿತ, ಗಮ್ೆಸ್, ಇತ್ಯಾದಿ ತಳಿಯ ಹಲಸಿನ ಹಣ್ಣು ಹಾಗೂ ಸಸಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.