ಸಾವಯವ ಕೃಷಿ ವೈವಿಧ್ಯ ಬೆಳೆಯ ಖುಷಿ

ಸಾವಯವ ಕೃಷಿ ವೈವಿಧ್ಯ ಬೆಳೆಯ ಖುಷಿ
Published on

ಮಂಜುನಾಥ್ ಹಂಚೀಹಳ್ಳಿ ಚನ್ನರಾಯಪಟ್ಟಣ
ಅಧಿಕ ಫಸಲನ್ನು ಪಡೆಯುವ ಉದ್ದೇಶದಿಂದ ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆ ಹಾಳು ಮಾಡುವ ಕಾಲಘಟ್ಟದಲ್ಲಿ ಶ್ರವಣಬೆಳಗೊಳ ಹೋಬಳಿ ಬೆಕ್ಕ ಗ್ರಾಮದ ಬಿ.ರಾಘವೇಂದ್ರ ಸಾವಯವ ಪದ್ಧತಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಬಿಕಾಂ ಪದವೀಧರರಾಗಿರುವ ರಾಘವೇಂದ್ರ ಪಿತ್ರಾರ್ಜಿತ 20 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯ ಮೂಲಕ ಗಮನ ಸೆಳೆದಿದ್ದಾರೆ. ಜಮೀನಿನಲ್ಲಿ 1000 ತೆಂಗಿನ ಮರಗಳನ್ನು ಬೆಳೆದಿದ್ದು, ಇವುಗಳ ಮಧ್ಯೆ ವಿವಿಧ ಬಗೆಯ ಆಯುರ್ವೇದ ಸಸ್ಯಗಳನ್ನು ಬೆಳೆದಿದ್ದಾರೆ. ನೂತನವಾಗಿ ತೆಂಗಿನ ಎಣ್ಣೆ ತಯಾರಿಸುವ ಉದ್ದಿಮೆ ಆರಂಭಿಸುವ ಮೂಲಕ ಸಂಸ್ಕರಿಸಿದ ಶುದ್ಧ ಎಣ್ಣೆ ಪೂರೈಕೆ ಮಾಡುತ್ತಿದ್ದಾರೆ.

ಜಮೀನಿನಲ್ಲಿ ಅಪರೂಪ ತಳಿಯ ಗಿಡಮರಗಳನ್ನು ಬೆಳೆಸಿದ್ದಾರೆ. 12 ತಳಿಯ ಮರಗಳು, ಔಷಧೀಯ ಗಿಡಮೂಲಿಕೆಗಳಾದ ನಿಂಬೆ ಹುಲ್ಲು, ಸೊಳ್ಳೆಹುಲ್ಲು, ಒಂದೆಲಗ, ಭೃಂಗರಾಜ, ರಾಸ್ನಾ, ಬಿಳಿ ಗುಳಗಂಜಿ, ರುದ್ರಾಕ್ಷಿ ಗಿಡ, ನುಗ್ಗೆ, ಉತ್ತರಾಣಿ, ಹತ್ತಿ, ಮುತ್ತುಗ, ಕದಿರ, ಅರಳಿ, ಬಿಳಿ ಎಕ್ಕದ ಗಿಡ, ದರ್ಬೆ, ಗರಿಕೆ, ಬನ್ನಿ ಗಿಡ, ಮಿಂಟಿ, ಅಮೃತಬಳ್ಳಿ, ಲಾವಂಚ ಗ್ರೀನ್ ಗ್ರಾಸ್, ಆಡುಸೋಗೆ, ನೆಲಬೇವು ಮುಂತಾದವು ತಳಿಯ ಸಸ್ಯಗಳನ್ನು ಬೆಳೆದಿದ್ದಾರೆ. ಸ್ಟ್ರಾಬೆರಿ, ಅಂಜೂರ, ನಲ್ಲಿಕಾಯಿ, ಸೀಬೆಗಿಡ, ನೇರಳೆ, ಕಾಡುಬಾಳೆ, ಅರ್ಜುನ ಮರ, ಲಕ್ಷ್ಮಣ ಫಲ, ಕುಂಕುಮದ ಮರಗಳನ್ನು ಕಾಣಬಹುದಾಗಿದೆ.

24 ತೀಥರ್ಂಕರರು ತಪಸ್ಸು ಮಾಡಿದ್ದರು ಎನ್ನಲಾದ ಪವಿತ್ರ ಗಿಡಗಳನ್ನು ಇಲ್ಲಿ ಪೋಷಣೆ ಮಾಡಲಾಗಿದೆ. ಜೈನ ತೀರ್ಥಂಕರರಿಗೆ ಜ್ಞಾನೋದಯವಾದ ಅಪರೂಪದ ಮರಗಳನ್ನು ಇಲ್ಲಿ ಕಾಣಬಹುದು. 24 ಗಿಡ ನೆಟ್ಟು ತೀರ್ಥಂಕರ ಹೆಸರಿನ ನಾಮಫಲಕ ಹಾಕಲಾಗಿದೆ. ವಿಮಲನಾಥರಿಗೆ ಜ್ಞಾನೋದಯವಾದ (ಜಂಬೂ ವ್ಯಕ್ತ), ಅನಂತನಾಥ (ಅಶ್ವಥ ವೃಕ್ಷ ), ಧರ್ಮನಾಥ (ಬೇಲ), ಶಾಂತನಾಥ (ನಂದಿ), ಕುಂಥನಾಥ (ತಿಲಕ), ಅರಹನಾಥ (ಆಮ), ಮಲ್ಲಿನಾಥ (ಸೀತಾ ಅಶೋಕ), ಮುನಿಸು ವ್ರತನಾಥ (ಚಂಪಕ), ನಮಿನಾಥ ( ಬಕುಳ), ನೇಮಿನಾಥ (ಬಿದಿರು), ಪಾಶ್ವನಾಥ (ದೇವದಾರು), ಮಹಾವೀರ (ಶಾಲ್ಮಲಿ), ವೃಷಭನಾಥ (ವಟವೃಕ್ಷ), ಅಜಿತನಾಥ (ಸಪ್ತಕರ್ಣಿ), ಶಂಭವನಾಥ (ಶಾಲ), ಅಭಿ ನಂದನ ಸಾಥ (ಸರಳವೃಕ್ಷ), ಪದ್ಮ ಪ್ರಭನಾಥ (ಪ್ರಿಯಾಂಗು), ಸುಮತಿನಾಥ (ಪ್ರಿಯಾಂಗು), ಸುಪಾಶ್ವನಾಥ (ಶಿರೀಷ), ಚಂದ್ರನಾಥ (ನಾಗ ಸಂಪಿಗೆ), ಪುಷ್ಪದಂತ (ತಾರೆ), ಶ್ರೀಕಲನಾಥ (ಪಾಲಕ), ಶ್ರೇಯಾಂಸ ನಾಥ (ತೆಂಟು), ವಾಸುಪೂಜ್ಯನಾಥ (ಕದಂಬ) ವೃಕ್ಷಗಳು ಇಲ್ಲಿವೆ.

ರಾಶಿ ವನ: ರಾಘವೇಂದ್ರ ಅವರ ತೋಟದಲ್ಲಿ ರಾಶಿವನ ಹಾಗೂ ನವಗ್ರಹವನ್ನು ಕಾಣಬಹುದಾಗಿದೆ. ರಾಶಿವನದಲ್ಲಿ ಮೇಷದಿಂದ ಹಿಡಿದು ಮೀನ ರಾಶಿಯವರೆಗೂ ಕ್ರಮವಾಗಿ ರಕ್ತಚಂದನ, ಸಪ್ತಪಣಿ, ಪನಸ, ಪಲಾಶ, ಖದಿರ, ಬಕುಳ, ಪಾಟಲ, ಆಮ್ರ, ಅಶ್ವತ್ಥ, ಶಿಂಶಫ, ಶಮಿ, ವಟ ವೃಕ್ಷಗಳನ್ನು ಬೆಳೆಸಲಾಗಿದೆ.

ನವಗ್ರಹ ವನ: ನವಗ್ರಹ ವನದಲ್ಲಿ ಸೂರ್ಯನಿಂದ ಮೊದಲ್ಗೊಂಡು ಕೇತುಗ್ರಹದವರೆಗೂ ಕ್ರಮವಾಗಿ ಅರ್ಕ, ಪಲಾಶ, ಅಪಾಮಾರ್ಗ, ಅಶ್ವತ್ಥ, ಔದುಂಬರ, ಶಮಿ, ಖದಿರ, ಧರ್ಭೆ, ದೂರ್ವಗಳನ್ನು ಕಾಣಬಹುದಾಗಿದೆ.

ನಕ್ಷತ್ರ ವನ: 27 ನಕ್ಷತ್ರಗಳಿಗೂ ಮರಗಳನ್ನು ಬೆಳೆಸಿ ಪೋಷಿಸಲಾಗಿದೆ. ಹಿಂದು ಪಂಚಾಂಗದಲ್ಲಿ ಇರುವ ಅಶ್ವಿನಿ ನಕ್ಷತ್ರದಿಂದ ಹಿಡಿದು ರೇವತಿ ನಕ್ಷತ್ರದವರೆಗೂ ಪ್ರತಿನಿಧಿಸುವ ಕಾಸರಕ, ಆಮ್ಲಕ, ಔದುಂಬರ, ಜಂಬು, ಖದಿರ, ಪಿಪ್ಪಲಿ, ವಂಶ, ಅಶ್ವತ್ಥ, ನಾಗಕೇಸರಿ, ಹೆಣ್ಣುಸಂಪಿಗೆ, ಪಲಾಶ, ಪ್ಲಕಬಸರಿ, ಆಮ್ರಾಶಕ, ಬಿಲ್ವ, ಅರ್ಜುನ, ಮಾಂಸರೋಹಿಣಿ, ಬಕುಳ, ಸರಳ, ಸರ್ಜು, ಚಂಪಕ, ಪನಸ, ಅರ್ಕ, ಶಮಿ, ಕದಂಬ, ಬೇವು, ಆಮ್ರ, ರೇವತಿ ನಕ್ಷತ್ರದ ಮಧುಕ ವೃಕ್ಷಗಳು ಇಲ್ಲಿವೆ. ಪ್ರತಿ ಮರದ ಕೆಳಗೂ ಜೇನು ಶೇಖರಣ ಪೆಟ್ಟಿಗೆ ಇಟ್ಟು ಶುದ್ಧ ಜೇನು ತುಪ್ಪವನ್ನು ಸಂಗ್ರಹಿಸಲಾಗುತ್ತಿದೆ.

ರಾಸಾಯನಿಕ ಗೊಬ್ಬರದಿಂದ ದೂರ: ರಾಘವೇಂದ್ರ ಅವರು, ವ್ಯವಸಾಯಕ್ಕೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದಿರುವುದು ವಿಶೇಷ. ತೆಂಗಿನ ಮರಗಳ ಬೆಳವಣಿಗೆಗೆ ರಾಸಾಯನಿಕ ಗೊಬ್ಬರ ಬಳಸದೆ ಜಮೀನಿನಲ್ಲಿ ಬಿದ್ದು ಹಾಳಾಗುತ್ತಿದ್ದ ತೆಂಗಿನ ಗರಿ, ಹುಲ್ಲು, ಕಸ ಕಡ್ಡಿ ಉಪಯೋಗಿಸಿಕೊಂಡು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನೇ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮರಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಬರದೇ ಒಂದು ಮರದಲ್ಲಿ ವರ್ಷಕ್ಕೆ ಕನಿಷ್ಠ 200 ತೆಂಗಿನಕಾಯಿಗಳು ದೊರಕುತ್ತಿವೆ.

ಅಂತರ್ಜಲ ವೃದ್ಧಿಗೆ ಕೊಳವೆಬಾವಿ: ಮಳೆಗಾಲದಲ್ಲಿ ವ್ಯರ್ಥವಾಗುವ ನೀರನ್ನು ಹಿಡಿದಿಟ್ಟುಕೊಳ್ಳಲು ತೋಟದ ಮೂಲೆಯಲ್ಲಿ 200*100ಅಡಿ ಅಗಲದ ಹೊಂಡಗಳನ್ನು ನಿರ್ಮಿಸಲಾಗಿದೆ. ಇದು ಅಂತರ್ಜಾಲ ವೃದ್ಧಿಗೂ ಸಹಕಾರಿಯಾಗಿದೆ. ಕೊಳವೆಬಾವಿಗಳಲ್ಲಿ ನೀರು ವೃದ್ಧಿಗೂ ಸಹಕಾರಿಯಾಗಿದೆ. ರಾಘವೇಂದ್ರ ಅವರಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಉದಯೋನ್ಮುಖ ಶ್ರೇಷ್ಠ ಕೃಷಿಕ ಪ್ರಶಸ್ತಿ, ಉತ್ತಮ ಸಾವಯುವ ಕೃಷಿಕ ಪ್ರಶಸ್ತಿ, ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ವಿವಿಧ ಸಂಘ, ಸಂಸ್ಥೆಗಳಿಂದ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net