

ಮಂಡ್ಯ: ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಸಾವಯವ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಲು ಗಾಯಕ ವಾಸುಕಿ ವೈಭವ್ ಹಾಡಿರುವ ಗೀತೆಯನ್ನು ಜ.2ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಿರಿಧಾನ್ಯ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2ರಂದು ಸಂಜೆ 4.30ಕ್ಕೆ ಗೀತೆ ಬಿಡುಗಡೆಯ ನಂತರ ಗಾಯಕ ವಾಸುಕಿ ವೈಭವ್ ಅವರಿಂದ ಗಾಯನ ರಸಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಿರಿಧಾನ್ಯ ಹಬ್ಬದ ಅಂಗವಾಗಿ ಅಂದು ಬೆಳಗ್ಗೆ 10 ಗಂಟೆಗೆ ಸಿರಿಧಾನ್ಯ ಪಾಕ ಸ್ಫರ್ಧೆ ಹಾಗೂ ಮಧ್ಯಾಹ್ನ 12 ಗಂಟೆಗೆ ರಾಗಿಮುದ್ದೆ ನಾಟಿಕೋಳಿ ಸಾರು ಊಟದ ಸ್ಫರ್ಧೆ ಆಯೋಜಿಸಲಾಗಿದೆ. ಸಾವಯವ ಸಿರಿಧಾನ್ಯ ಪದಾರ್ಥಗಳು ಆರೋಗ್ಯವನ್ನು ವೃದ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾವಯವ ಸಿರಿಧಾನ್ಯ ಗಳಿಂದ ತಯಾರಿಸಿದ ಆಹಾರ ತಿನಿಸುಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲು ಗುಣಮಟ್ಟ ಆಹಾರ ತಯಾರಿಸುವ ಸಂಘಗಳಿಗೆ ಮಳಿಗೆ ವ್ಯವಸ್ಥೆ ಮಾಡಿ ಆಹಾರ ಮೇಳ ಆಯೋಜಿಸುವುದರ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿರಿಧಾನ್ಯ ಹಬ್ಬ ಕಾರ್ಯಕ್ರಮದಲ್ಲಿ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ವಿಚಾರ ಮಂಡನೆ ಮಾಡಲಿದ್ದಾರೆ. ಇದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದೆ. ಆದ್ದರಿಂದ ಸಾರ್ವಜನಿಕರು, ರೈತರು, ಸ್ವಯಂ ಸೇವಾ ಸಂಘ, ಮಹಿಳಾ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಅಶೋಕ್, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕೃಷ್ಣಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ನಗರಸಭೆ ಆಯುಕ್ತ ಮಂಜುನಾಥ್ ಇತರರಿದ್ದರು.