ಸಾವಯವ ಕೃಷಿಗೆ ಒತ್ತು ನೀಡಲಿ - ಶಾಸಕ ಲಕ್ಷ್ಮಣ ಸವದಿ

01
Published on

ಅಥಣಿ: ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಸಾವಯುವ ಕೃಷಿ ಪ್ರಾರಂಭಿಸಿ ಆಹಾರ ಧಾನ್ಯ, ತರಕಾರಿ ಬೆಳೆದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯ ವಿಶ್ವ ಬ್ಯಾಂಕಿನ ರಿವಾರ್ಡ್ ಯೋಜನೆಯ ಜೀವನೋಪಾಯ ಘಟಕದಡಿ ಈಚೆಗೆ ಹಮ್ಮಿಕೊಂಡಿದ್ದ ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಥಣಿ ತಾಲೂಕಿನ ತೆಲಸಂಗ ಹಾಗೂ ಅರಟಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬ್ಯಾಡಗಿ, ಹಾಲಳ್ಳಿ ಗ್ರಾಮಗಳ 27 ಸ್ವ-ಸಹಾಯ ಸಂಘಗಳಿಗೆ ತಲಾ 50 ಸಾವಿರ ರೂ.ಗಳಂತೆ 36 ಲಕ್ಷ ರೂ. ಸಹಾಯಧನ ನೀಡಲಾಗಿದೆ.

2 ಒಕ್ಕೂಟಗಳಿಗೆ ತಲಾ 4 ಲಕ್ಷ ರೂ.ಗಳಂತೆ 8 ಲಕ್ಷ ರೂ. ಹಾಗೂ ಬೀಜ ಧನವಾಗಿ 8 ಜನರಿಗೆ 1.60 ಲಕ್ಷ ರೂ. ಸಹಾಯ ಧನದ ಚೆಕ್ ವಿತರಣೆ ಮಾಡಲಾಗಿದೆ. ವಿಶೇಷ ಅನುದಾನ ಪಡೆದಿರುವ ಸ್ವ-ಸಹಾಯ ಸಂಘಗಳ ಸದಸ್ಯರು ಅದರ ಸದುಪಯೋಗದೊಂದಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಬೇಕು. ಉದ್ಯಮಶೀಲತೆ ಹೆಚ್ಚಿಸಲು ಸ್ವ-ಸಹಾಯ ಸಂಘಗಳು ನೆರವಾಗುತ್ತವೆ ಎಂದು ತಿಳಿಸಿದರು.

ಸ್ವ-ಸಹಾಯ ಸಂಘಗಳಿಗೆ 50 ಸಾವಿರ ರೂ. ಚೆಕ್ ವಿತರಿಸಲಾಯಿತು. ತೆಲಸಂಗ ಗ್ರಾಪಂ ಅಧ್ಯಕ್ಷ ಭಾರತಿ ಲೋಕಾಂಡೆ, ಅರಟಾಳ ಗ್ರಾಪಂ ಅಧ್ಯಕ್ಷ ಶಾಂತಾಬಾಯಿ ಹಟ್ಟಿ, ಮುಖಂಡರಾದ ಶ್ರೀಶೈಲ ನಾಯಿಕ, ರಾಮ ಪೂಜಾರಿ, ರಾಮನಗೌಡ ಪಾಟೀಲ, ಶಿವಪ್ಪ ಹಟ್ಟಿ, ಶಶಿ ಪಾಟೀಲ, ಮಲ್ಲಪ್ಪ ಪೂಜಾರಿ, ಜಡೆಪ್ಪ ಕುಂಬಾರ, ಮಲ್ಲು ಕುಳ್ಳೋಳಿ, ಮುತ್ತು ಮೊಕಾಶಿ, ಪ್ರದೀಪ ನಂದಗಾಂವ, ಕೃಷಿ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ, ಅಧಿಕಾರಿಗಳಾದ ರಮೇಶ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net