

ಬೆಳಗಾವಿ: ಸಾವಯವ ಕೃಷಿ ಪ್ರೋತ್ಸಾಹಿಸುವ ಮತ್ತು ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ- ಸಿರಿಧಾನ್ಯ ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾವಯವ ಉತ್ಪನ್ನಗಳ ಬಳಕೆ ಅವಶ್ಯಕವಾಗಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಗೆ ರೈತರು ಮುಂದಾಗುತ್ತಿಲ್ಲ ಎಂದರು.
ದೇಶದಲ್ಲಿ ಸಾವಯವ ಕೃಷಿ ಉತ್ತೇಜನ ನೀಡುವ ಉದ್ದೇಶದಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಜತೆಗೆ ವಾರ್ಷಿಕ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡುತ್ತಿದೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿಗೆ ಮತ್ತು ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ, ರಸಗೊಬ್ಬರ ಅತೀಯಾದ ಬಳಕೆಯಾಗುತ್ತಿದೆ. ಆರೋಗ್ಯಕರ ಆಹಾರದ ಕಡೆ ಗಮನಹರಿಸಬೇಕಿದೆ. ರಾಸಾಯನಿಕ ಬಳಕೆಯಿಂದ ನಮ್ಮ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದೇವೆ. ಹಿರಿಯರು ನೀಡಿದ ಭೂಮಿ ರಕ್ಷಿಸಬೇಕಿದ್ದು, ಸರ್ಕಾರವು ಸಾವಯವ ಕೃಷಿ ಹೆಚ್ಚಿನ ಆದ್ಯತೆ ನೀಡಲಿದೆ. ರೈತರು ಸ್ವಯಂ ಪ್ರೇರಣೆಯಿಂದ ಸಾವಯವ ಕೃಷಿಯತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು. ನಗರದಲ್ಲಿ ಜ.25 ಮತ್ತು 26 ರಂದು ಎರಡು ದಿನಗಳ ಕಾಲ ಸಾವಯವ-ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ.
ಸಾರ್ವಜನಿಕರು, ರೈತರು, ವ್ಯಾಪಾರಸ್ಥರು ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಸಿರಿಧಾನ್ಯಗಳನ್ನು ಹೆಚ್ಚೆಚ್ಚು ಬಳಸಿದರೆ ರೋಗಗಳಿಂದ ಮುಕ್ತರಾಗಬಹುದು. ರೈತರು ಸಾವಯವ ಕೃಷಿಗೆ ಹೆಚ್ಚಿನ ಅದ್ಯತೆ ನೀಡಬೇಕು. ಸಾವಯವ ಕೃಷಿಗಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಡಾ.ವಿ.ಜೆ.ಪಾಟೀಲ, ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪ ನಿರ್ದೇಶಕ ಎಚ್.ಡಿ.ಕೋಳೆಕರ, ತೋಟಗಾರಿಕೆ ಉಪ ನಿರ್ದೇಶಕ ರವೀಂದ್ರ ಹಕಾಟಿ, ವಿದ್ಯಾರ್ಥಿಗಳು, ರೈತರು ಇದ್ದರು.
ನಗರದ ಚನ್ನಮ್ಮ ವೃತ್ತದಿಂದ ಆರಂಭಗೊಂಡ ಸಾವಯವ-ಸಿರಿಧಾನ್ಯ ನಡಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನವನ್ನು ತಲುಪಿತು. ನಡಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ಮಕ್ಕಳು ದೇಹದ ದಣಿವಿಗೆ ಸಿರಿಧಾನ್ಯದ ಅಡಿಗೆ, ಸಿರಿಧಾನ್ಯ ಹಳೆಯ ಊಟ ಹೊಸ ನೋಟ ಎಂಬ ಘೋಷಣೆಗಳ ಮೂಲಕ ಜೋಳ, ಸಾವಿ, ಸಜ್ಜೆ, ನವಣೆ ಸೇರಿದಂತೆ ವಿವಿಧ ಬಗೆಯ ಸಿರಿಧಾನ್ಯಗಳ ಮಹತ್ವ ಸಾರಿದರು.