

ಹುಬ್ಬಳ್ಳಿ: ಅಂಗಾಂಗ ಕಸಿಗಾಗಿ ರಕ್ತ ಮಾದರಿ ಪಡೆಯಲು ಬೆಂಗಳೂರಿಗೆ ತೆರಳಬೇಕಿತ್ತು. ಈಗ ನಮ್ಮ ಕಿಮ್ಸ್‌ನಲ್ಲಿಯೇ ಲಭ್ಯವಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ ಹೇಳಿದರು.
ಬೆಂಗಳೂರು ಮೆಡಿಕಲ್ ಸರ್ವಿಸಸ್ ಟ್ರಸ್ಟ್(ಬಿಎಂಎಸ್‌ಟಿ), ರೋಟರಿ ಕ್ಲಬ್ ಆಫ್ ಬೆಂಗಳೂರು ಮತ್ತು ಟಿಟಿಕೆ ಪ್ರೆಸ್ಟೀಜ್ ವತಿಯಿಂದ ನಗರದ ಕಿಮ್ಸ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಒಡಂಬಡಿಕೆ ಪತ್ರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೃತ ರೋಗಿಯ ಅಂಗಾಂಗ ದಾನ ಪಡೆಯುವ ವೇಳೆ ಅವರ ಕುಟುಂಬದವರು ಹೆಚ್ಚು ಸಮಯ ಕಾಯಬೇಕಿತ್ತು. ಮೃತ ವ್ಯಕ್ತಿಯನ್ನು ಕಳೆದುಕೊಂಡದಲ್ಲದೇ ಶವ ಪಡೆಯುವುದು ವಿಳಂಬವಾಗುತ್ತಿತ್ತು. ಇದರಿಂದ ಕುಟುಂಬದವರ ಮನಸ್ಸಿಗೆ ಘಾಸಿಯಾಗುತ್ತಿತ್ತು. ಈಗ ಸಮಯ ಬಹಳ ಉಳಿತಾಯವಾಗಲಿದೆ ಎಂದರು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ನಮ್ಮ ಕಿಮ್ಸ್ ಆವರಣದಲ್ಲಿ ಪ್ರಯೋಗಾಲಯ ಆರಂಭಿಸಿರುವುದು ಸಂತಸ ತಂದಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ. ಪ್ರತಿ ತಿಂಗಳು 100-150 ಯೂನಿಟ್ ಸ್ಕ್ರೀನ್ಡ್ ರೆಡ್ ಸೆಲ್‌ಗಳನ್ನು ಒದಗಿಸುವ ಬೆಂಬಲ ಸಿಕ್ಕಿರುವುದಕ್ಕೆ ಹೆಮ್ಮೆಯಾಗಿದೆ ಎಂದರು.
ಬಿಎಂಎಸ್‌ಟಿ ವೈದ್ಯಕೀಯ ನಿರ್ದೇಶಕಿ ಡಾ. ಲತಾ ಜಗನ್ನಾಥನ್ ಮಾತನಾಡಿ, ಕಿಮ್ಸ್‌ವತಿಯಿಂದ ಲ್ಯಾಬ್‌ಗೆ ಉದಾರವಾಗಿ ಜಾಗ ನೀಡಿದ್ದಕ್ಕೆ ಅಭಾರಿಯಾಗಿದ್ದೇವೆ ಎಂದರು.
ಕಿಮ್ಸ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ಥಾಪಿತ ಟ್ರಾನ್ಸ್‌ಪ್ಲಾಂಟ್ ಇಮ್ಯುನೊಲಜಿ ಲ್ಯಾಬ್‌ಗೆ ಸಂಬಂಧಿಸಿದಂತೆ ಕಿಮ್ಸ್ ಆಡಳಿತ ಮಂಡಳಿ ಹಾಗೂ ಬೆಂಗಳೂರು ಮೆಡಿಕಲ್ ಸರ್ವಿಸಸ್ ಟ್ರಸ್ಟ್(ಬಿಎಂಎಸ್‌ಟಿ), ರೋಟರಿ ಕ್ಲಬ್ ಆಫ್ ಬೆಂಗಳೂರು ಮತ್ತು ಟಿಟಿಕೆ ಪ್ರೆಸ್ಟೀಜ್ ಮಧ್ಯೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಳ್ಳಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ಯಾಥಾಲಜಿ ವಿಭಾಗದ ಡಾ. ಸುನೀತಾ ವೆರ್ಣೇಕರ, ಡಾ. ಕವಿತಾ ಏವೂರ, ಟಿಟಿಕೆ ಪ್ರೆಸ್ಟೀಜ್ ಚೇರ್ಮನ್ ಜಗನ್ನಾಥನ್, ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳಾದ ರಘುರಾಮ್, ನೀಲಕಂಠ ರಾಠೋಡ, ಬಿಎಂಎಸ್‌ಟಿ ಚೇರ್ಮನ್ ಕೆ.ಎನ್. ಪ್ರಭಾಕರ, ಇತರರು ಇದ್ದರು.